HEALTH TIPS

ಸಾಹಿತ್ಯ ಬರಹಗಳು ಪ್ರಚಾರ, ಪ್ರತಿಷ್ಠೆಯ ಸರಕಾಗದಿರಲಿ-ಪರಿಣಿತ ರವಿ ಎಡನಾಡು-ದಸರಾ ಸಾಹಿತ್ಯ ಸಂಭ್ರಮ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅಭಿಮತ


      ಕುಂಬಳೆ: ಸಾಹಿತ್ಯ ಬರಹಗಳು ಸಮಾಜದ ಸರಿ-ತಪ್ಪುಗಳಿಗೆ ಕಾವಲು ಭಟನಾಗಿ ಋಜು ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿ ಹೊಂದಿದೆ. ಸಾಹಿತ್ಯ ಬರಹಗಳು ಪ್ರಚಾರ, ಪ್ರತಿಷ್ಠೆಯ ಸರಕಾಗದೆ ಸಾಮಾಜಿಕ ಸ್ವಾಥ್ಯ, ನೋವು ನಲಿವುಗಳಿಗೆ ಧ್ವನಿಯಾಗಿ ಆರೋಗ್ಯಪೂರ್ಣ ಚರ್ಚೆಗೆ ಕಾರಣವಾಗುವ ಅಂಶಗಳಿಂದ ಬಲಿಷ್ಠವಾಗಬೇಕು ಎಂದು ಎರ್ನಾಕುಳಂ ಸೆಂಟ್ರಲ್ ಸ್ಕೂಲಿನ ಆಂಗ್ಲ ಶಿಕ್ಷಕಿ, ಕನ್ನಡದ ಯುವ ಕವಯಿತ್ರಿ ಪರಿಣಿತ ರವಿ ಎಡನಾಡು ಅವರು ತಿಳಿಸಿದರು.
    ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕಗಳ ಜಂಟಿ ಆಶ್ರಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ನಾರಾಯಣಮಂಗಲದಲ್ಲಿರುವ ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ ಸ್ವಗೃಹ ಶ್ರೀನಿಧಿ ನಿಲಯದಲ್ಲಿ ಇತ್ತೀಚೆಗೆ ನಡೆದ ದಸರಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಂಗವಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕವಿತೆಗಳು ಮನಸ್ಸನ್ನು ಅರಳಿಸಿದಾಗ ಪ್ರಪುಲ್ಲತೆ ನೆಲೆಗೊಳ್ಳುತ್ತದೆ. ಪ್ರತಿಯೊಬ್ಬರ ಆಂತರಂಗಿನ ಭಾವಗಳ ಅಕ್ಷರ ರೂಪಗಳಾದ ಬರಹಗಳು ವೈಯುಕ್ತಿಕತೆಯನ್ನು ಮೀರಿ ಸಾಮುದಾಯಿಕತೆಯನ್ನು ಪ್ರತಿಬಿಂಬಿಸಿದಾಗ ಕವಿತೆ ಗೆಲ್ಲುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಯುವ ಬರಹಗಾರರು ಪುಸ್ತಕಗಳ ಓದು, ಪ್ರವಾಸ, ಸಂದರ್ಶನಗಳ ಮೂಲಕ ಅನುಭವಗಳನ್ನು ಬಲಗೊಳಿಸಬೇಕು ಎಂದು ಅವರು ಈ ಸಂದರ್ಭ ಕರೆನೀಡಿದರು.
    ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಕವಯಿತ್ರಿ ಸತ್ಯವತಿ ಕೊಳಚಪ್ಪು ಅವರು, ಗಡಿನಾಡು ಕಾಸರಗೋಡಿನ ಕನ್ನಡ ಅಸ್ಮಿತೆ ಹೆಚ್ಚು ಶಕ್ತಿಯುತವಾದುದು. ಅನ್ಯ ಭಾಷಿಗರ ನಿರಂತರ ದಬ್ಬಾಳಿಕೆಯ ಮಧ್ಯೆ ತನ್ನ ಅಸ್ತಿತ್ವಕ್ಕಾಗಿ ಹೆಣಗುವ ಇಲ್ಲಿಯ ಕನ್ನಡ ಮನಸ್ಸುಗಳಲ್ಲಿ ಭಾಷಾ ಪ್ರೇಮ ಸಾಗರದೋಪಾದಿಯಲ್ಲಿ ಮೊರೆಯಬೇಕು ಎಂದು ತಿಳಿಸಿದರು. ಇಲ್ಲಿಯ ಮೂಲ ಭಾಷೆಯಾದ ಕನ್ನಡವನ್ನು ತುಳಿದು ಆಂಗ್ಲ ಭಾಷಾ ಶಿಕ್ಷಣಕ್ಕೆ ಮಾರುಹೋಗುವುದು ಅಪಾಯಕಾರಿಯಾಗಿದ್ದು, ಇದರಿಂದ ಬಾಂಧವ್ಯಕ್ಕೆ ಕುತ್ತು ಉಂಟಾಗುವ ಭೀತಿಯಿದೆ ಎಂದರು. ಕನ್ನಡದ ಕೊಲೆ ಹೆತ್ತ ತಾಯಿಗೆ ನಾವೆಸಗುವ ಅನ್ಯಾಯಕ್ಕೆ ಸಮವಾದುದು. ಈ ನಿಟ್ಟಿನಲ್ಲಿ ಯುವ ಸಾಹಿತಿಗಳು, ಬರಹಗಾರರು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
    ಕವಿಗೋಷ್ಠಿಯಲ್ಲಿ ರವೀಂದ್ರನ್ ಪಾಡಿ,ಬಾಲಕೃಷ್ಣ ಬೇರಿಕೆ, ವಿಜಯರಾಜ ಪುಣಿಚಿತ್ತಾಯ, ಭರತ್ ಕಾವು, ಬಾಲಕೃಷ್ಣ ಬೇಕೂರು, ನಿರ್ಮಲಾ ಸೇಸಪ್ಪ ಖಂಡಿಗೆ, ಪ್ರಮೀಳಾ ಚುಳ್ಳಿಕ್ಕಾನ, ಪ್ರೇಮಾ ಉದಯಕುಮಾರ್, ಸೀತಾಲಕ್ಷ್ಮೀ ವರ್ಮ ವಿಟ್ಲ, ಪ್ರಭಾವತಿ ಕೆದಿಲಾಯ ಪುಂಡೂರು, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ಆನಂದ ರೈ ಅಡ್ಕಸ್ಥಳ, ಗೋಪಾಲಕೃಷ್ಣ ಭಟ್ ಗೋಳಿತ್ತಡ್ಕ, ಶ್ವೇತಾ ಕಜೆ, ರಿತೇಶ್ ಕಿರಣ್ ಕಾಟುಕುಕ್ಕೆ, ಶಶಿಕಲಾ ಕುಂಬಳೆ, ಸುಶೀಲಾ ಪದ್ಯಾಣ, ಎಸ್.ಕೆ.ಗೋಪಾಲಕೃಷ್ಣ ಭಟ್, ಉದಯರವಿ ಕೋಂಬ್ರಾಜೆ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು.
   ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ, ಸಹ ಸಂಚಾಲಕಿ ಚೇತನಾ ಕುಂಬಳೆ, ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಿರಿಗನ್ನಡ ವೇದಿಕೆಯ ಗಡಿನಾಡ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ, ಗಮಕ ಕಲಾ ಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಸಾಮಾಜಿಕ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು, ಕಸಾಪ ಗಡಿನಾಡ ಘಟಕದ ಸದಸ್ಯ ಸುಂದರ ಬಾರಡ್ಕ, ಪತ್ರಕರ್ತ ಜಯ ಮಣಿಯಂಪಾರೆ, gಂಥಿಞ vsಒಣ bಂಡಿತಿಜಿಞ, ಪುಸ್ತಕ ಪ್ರಕಾಶಕ ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಅಭಿಲಾಷ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ ಗೋಷ್ಠಿ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries