ಪೆರ್ಲ:ವಿದ್ಯಾರ್ಥಿಗಳು ಕೇವಲ ಅಲ್ಪಕಾಲಿಕವಾಗಿ ಗುರುತಿಸಿಕೊಳ್ಳದೆ, ಅನಂತವಾಗಿ ಗುರುತಿಸಿಕೊಳ್ಳುವಂತಾಗಬೇಕು. ಸಂಕುಚಿತ ಮನೋಭಾವ ದೂರ ಮಾಡಿ ವಿಶಾಲ ಹೃದಯಿಗಳಾಗಬೇಕು ಎಂದು ಪಡ್ರೆ ವಾಣೀನಗರ ಶಾಲೆಯ ಹಿರಿಯ ವಿದ್ಯಾರ್ಥಿನಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಪತ್ರಕರ್ತೆ ವಿನುತಾ ಪೆರ್ಲ ಹೇಳಿದರು.
ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಸಭಾಂಗಣದಲ್ಲಿ ಶಾಲಾ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಬೆಳೆದು ಅಂಗೈಗೇ ನಿಲುಕುವಂತಾಗಿದೆ. ಇದು ಉಜ್ವಲ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪುಸ್ತಕ ಓದುವ ಸಂಸ್ಕøತಿ ಕ್ಷೀಣಿಸುತ್ತಿದೆ. ಮೊಬೈಲ್ ಸಂಸ್ಕøತಿಯಿಂದ ಪರಸ್ಪರ ಸಂಬಂಧಗಳು, ಮನವೀಯ ಮೌಲ್ಯ, ಪ್ರೀತಿ, ವಿಶ್ವಾಸಗಳು ಮಾಯವಾಗುತ್ತಿವೆ. ತಂತ್ರಜ್ಞಾನ ಕೇವಲ ಸಮಯ ಕಳೆಯುವ ಸಾಧನವಾಗಿರದೆ ಧನಾತ್ಮಕ ಅಂಶಗಳ ಸದುಪಯೋಗ ಪಡಿಸಬೇಕು. ಮಕ್ಕಳಿಗೆ ತಂತ್ರಜ್ಞಾನದ ರುಚಿ ಹಚ್ಚಲು ಬಿಡದೆ ಸಂಸ್ಕøತಿ ಶಿಕ್ಷಣ ಸಿಗುವಂತಾಗಲು ಒತ್ತು ನೀಡಬೇಕು. ಪುಸ್ತಕ, ಪತ್ರಿಕೆಗಳನ್ನು ಓದುವ, ವಾರ್ತೆ ವೀಕ್ಷಣೆ ಮೂಲಕ ವರ್ತಮಾನದ ಪರಿಪೂರ್ಣ ಅರಿವನ್ನು ಹೊಂದಬೇಕು. ಗುರು ಹಿರಿಯರನ್ನು ಗೌರವಿಸುತ್ತಾ ಎಲ್ಲರೊಂದಿಗೆ ಉತ್ತಮ ಭಾಂಧವ್ಯ ಬೆಳೆಸಬೇಕು. ಕೇವಲ ಅಂಕ, ಸ್ಥಾನ ಮಾನ, ಬಹುಮಾನ ಗಳಿಕೆಯಷ್ಟೇ ಸ್ಪರ್ಧೆಯ ಉದ್ದೇಶವಲ್ಲ. ಶ್ರದ್ಧೆ, ಶ್ರಮ, ನಿರಂತರ ಅಭ್ಯಾಸ, ಸತತ ಪ್ರಯತ್ನ, ಆತ್ಮಧೈರ್ಯವಿದ್ದಲ್ಲಿ ಸರಳವಾಗಿ ಸ್ಪರ್ಧೆಗಳಲ್ಲಿ ವಿಜಯ ಗಳಿಸಬಹುದು. ಅದೇ ರೀತಿ ನಿರಂತರ ಗೆಲುವು ಯಾವುದೇ ರೀತಿಯ ಅಹಂಭಾವಗಳಿಗೆ ಅವಕಾಶ ನೀಡುವಂತಾಗಬಾರದು. ಆರೋಗ್ಯಪೂರ್ಣ ಸ್ಪರ್ಧೆಗಳಿಂದ ನೈಜ ಪ್ರತಿಭೆಗಳು ಅನಾವರಣ ಗೊಳ್ಳುವುದು ಎಂದು ಅವರು ತಿಳಿಸಿದರು.
ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಯತೀಂದ್ರ ರೈ ಅಧ್ಯಕ್ಷತೆ ವಹಿಸಿದ್ದರು.ಮಾತೃ ಮಂಡಳಿ ಅಧ್ಯಕ್ಷೆ ಹರಿಣಾಕ್ಷಿ, ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರಸಿಂಹ ಪೂಜಾರಿ, ಪ್ರಾಂಶುಪಾಲ ಗಂಗಾಧರ ಕೆ., ಮುಖ್ಯ ಶಿಕ್ಷಕ ವಾಸುದೇವ ನಾಯಕ್, ಹಿರಿಯ ಶಿಕ್ಷಕಿ ನಾಗರತ್ನಾ ಶುಭ ಹಾರೈಸಿದರು. ಕಲೋತ್ಸವ ಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಸ್ವಾಗತಿಸಿ,ಗೋಪಾಲ ಮಾಸ್ತರ್ ನಿರೂಪಿಸಿದರು.





