HEALTH TIPS

ಪ್ರತಿಭೆಗೆ ಬಾಗಿದ ಬೇಗುದಿ- ತೃಶಾಲಕ್ಷ್ಮೀಯೆಂಬ ಅಪೂರ್ವ ಪ್ರತಿಭೆಯ ಬಗ್ಗೆ ಗೊತ್ತೇ!


       ಪೆರ್ಲ: ಕಿತ್ತು ತಿನ್ನುವ ಬಡತನ ಮತ್ತು ವಿಶೇಷ ಚೇತನದ ಬೇಗುದಿಯ ಮಧ್ಯೆ ಅಂತಃಕರಣದೊಳಗಿನ ಕಲಾಸಕ್ತಿ, ಪ್ರತಿಭಾ ಅನಾವರಣದ ತುಡಿತದಿಂದ ವೇದಿಕೆಯೇರಿ ನೃತ್ಯಗೈದು ಕುತೂಹಲ ಹಾಗೂ ಅಚ್ಚರಿಗೊಳಗಾಗಿರುವ ಗಡಿ ಗ್ರಾಮ ಕಾಟುಕುಕ್ಕೆಯ ವಿದ್ಯಾರ್ಥಿನಿಯೋರ್ವೆ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಸೆಳೆದಿದ್ದಾಳೆ.
     ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ತೃಶಾಲಕ್ಷ್ಮಿ ಸುದ್ದಿಯಲ್ಲಿರುವ ವಿಶಿಷ್ಟ ಪ್ರತಿಭೆ. ಎಂಡೋಸಲ್ಫಾನ್ ದುಷ್ಪರಿಣಾಮದಿಂದ ತನ್ನ ಎರಡೂ ಕಾಲುಗಳ ಪಾದಗಳು ಒಳಕ್ಕೆಳೆಯಲ್ಪಟ್ಟು ನಡೆದಾಡಲು ಹರಸಾಹಸ ಪಡುವ ಈಕೆ ಇತ್ತೀಚೆಗೆ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಯುವಜನೋತ್ಸವದಲ್ಲಿ ತನ್ನ ಊನಗೊಂಡಿರುವ ಪಾದಗಳಲ್ಲಿ ಏಕ ವ್ಯಕ್ತಿ ನೃತ್ಯವನ್ನು ಸಮರ್ಪಕವಾಗಿ ಪ್ರದರ್ಶಿಸುವ ಮೂಲಕ ತನ್ನಲ್ಲಿಯ ದೈಹಿಕ ಕೊರತೆಯನ್ನು ಮೆಟ್ಟಿನಿಂತು ಬೆರಗಾಗಿಸಿದ್ದಾಳೆ.
     ಮೂಲತಃ ಮುಂಡಿತ್ತಡ್ಕ ಸಮೀಪದ ಬೇರಿಕುಂಜೆ ನಿವಾಸಿಯಾದ ಈಕೆ ದಿ.ಅಪ್ಪಣ್ಣ ನಾಯ್ಕ ಹಾಗೂ ಸೀತಾ ದಂಪತಿಗಳ ಸುಪುತ್ರಿ. ಈಕೆಯ ತಂದೆ ಅಪ್ಪಣ್ಣ ನಾಯ್ಕ ಕಳೆದ ವರ್ಷ ನಿಧನರಾದ ಬಳಿಕ ತಾಯಿ ಹಾಗೂ ಸಹೋದರಿಯೊಂದಿಗೆ ಕಾಟುಕುಕ್ಕೆಯ ಕುಡ್ತಡ್ಕದ ತಮ್ಮ ಅಜ್ಜನ ಮನೆಗೆ (ಅಜ್ಜ-ಈಶ್ವರ ನಾಯ್ಕ) ಬಂದು ನೆಲಸಿರುತ್ತಾಳೆ. ಕಡು ಬಡತನದ ಕುಟುಂಬದಲ್ಲಿ ದಿನನಿತ್ಯದ ತುತ್ತಿಗೆ ಬವಣೆಪಡುವ ಸಂಕಷ್ಟದಲ್ಲಿರುವ ಈಕೆಗೆ ಎಳವೆಯಲ್ಲಿ ಎಂಡೋಸಲ್ಫಾನ್ ಕಾರಣದಿಂದ ವೈಕಲ್ಯತೆ ಪ್ರಾಪ್ತವಾಗಿತ್ತು. ಕಲಿಕೆ ಹಾಗೂ ಇತರ ಚಟುವಟಿಕೆಗಳಲ್ಲಿ ಮುಂದಿರುವ ಈಕೆಗೆ ಅಂಗವಿಕಲ ನೆರವು ಹೊರತುಪಡಿಸಿ ಸರ್ಕಾರದ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ವಿಶೇಷವೆಂದರೆ ಎಂಡೋಸಲ್ಫಾನ್ ದುರಿತರ ಪಟ್ಟಿಯಲ್ಲೂ ಈವರೆಗೆ ಈಕೆಯ ಹೆಸರು ಸೇರ್ಪಡೆಯಾಗಿಲ್ಲ!
     ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಂಡಿತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿರುವ ತೃಶಾಲಕ್ಷ್ಮಿ ಅಲ್ಲೂ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಳು. ಪ್ರಸ್ತುತ ವಾಸಿಸುತ್ತಿರುವ ಅಜ್ಜನ ಮನೆಯಲ್ಲಿ ಕಡು ಬಡತನವಿದ್ದು, ಇವಳ ಮಾವ(ತಾಯಿಯ ಸಹೋದರ) ಎಂಡೋಪೀಡಿತರಾಗಿದ್ದು ದುಡಿಯಲಾರದ ಸ್ಥಿತಿಯಲ್ಲಿದ್ದಾರೆ. ಅಜ್ಜ 70 ರ ಹರೆಯದ ಈಶ್ವರ ನಾಯ್ಕ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ತಾಯಿ ಸೀತಾ ನಿರ್ವಹಣೆಗೆ ಹೆಗಲು ನೀಡಲು ಬೀಡಿ ಕಟ್ಟಿ ಇಬ್ಬರು ಹೆಣ್ಮಕ್ಕಳ ಭವಿಷ್ಯ ರೂಪಿಸುವ ಕನಸು ಕಾಣುತ್ತಿದ್ದಾರೆ. ಸಹೋದರಿ ಕಾಟುಕುಕ್ಕೆ ಶಾಲೆಯಲ್ಲೇ ಹತ್ತನೇ ತರಗತಿ ವ್ಯಾಸಂಗಗೈಯ್ಯುತ್ತಾಳೆ.
     ಪ್ರಜ್ಞಾವಂತ ಸಹೃದಯರ ನೆರವು ಈ ಅತಂತ್ರ ಕುಟುಂಬಕ್ಕೆ ಅಗತ್ಯವಿದೆ. ಪ್ರತಿಭೆ ಹಾಗೂ ಅವಕಾಶಗಳಿದ್ದರೂ ಆ ದಾರಿಯಲ್ಲಿ ಸಂಚರಿಸಲು ನೆರವಾಗುವವರು ತೃಶಾಲಕ್ಷ್ಮೀ ಅವರ ತಾಯೀ ಸೀತಾ 8129094265 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
     ಅಭಿಮತ:
   ದೈಹಿಕ ಕ್ಷಮತೆಯ ಕೊರತೆಯ ಮಧ್ಯೆ ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೃಶಾಲಕ್ಷ್ಮಿಯ ಸಾಮಥ್ರ್ಯ ಸ್ತುತ್ಯರ್ಹ. ಆದರೆ ಕಡು ಬಡತನದಲ್ಲಿರುವ ಈ ಕುಟುಂಬಕ್ಕೆ ನೆರವಿನ ಅಗತ್ಯ ಇದೆ. ಜೊತೆಗೆ ಎಂಡೋ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಅಗತ್ಯವೂ ಇದೆ. ಶಾಲೆಯಲ್ಲಿ ಆಕೆಯ ಎಲ್ಲಾ ಆಸಕ್ತಿಗಳಿಗೂ ಬೆಂಬಲ ನೀಡಿ ಮುನ್ನಡೆಸಲಾಗುತ್ತದೆ.
                                            ವಾಣಿ.ಕೆ.
                      ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಹೈಯರ್ ಸೆಕೆಂಡರಿಯ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ತೃಶಾಲಕ್ಷ್ಮಿಯ ನೆರೆಮನೆ ನಿವಾಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries