ಕಾಸರಗೋಡು: ಶಬ್ದ ಮಾಲಿನ್ಯ ವಿರುದ್ಧ ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಜನಜಾಗೃತಿ ಕಾರ್ಯಕ್ರಮ ಶೀಘ್ರದಲ್ಲಿ ನಡೆಸಲಾಗುವುದು.
ನಿಗದಿತ ಪ್ರಮಾಣಕ್ಕಿಂತ ಅಧಿಕ ಸಾಮಥ್ರ್ಯದ ಶಬ್ದವನ್ನು ನಿರಂತರ ಕೇಳಿಸಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ಶಾಲಾ ವಿದ್ಯಾರ್ಥಿಗಳಲ್ಲಿ ಶ್ರವಣದೋಷ ಹೆಚ್ಚಳಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುವುದು.
ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನ್ಯಾಷನಲ್ ಇನೀಷಿಯೇಟಿವ್ ಫಾರ್ ಸೇಫ್ ಸೌಂಡ್(ಎನ್.ಐ.ಎಸ್.ಎಸ್.)ನ ಅಧ್ಯಕ್ಷ ಡಾ.ಸಿ.ಜಾನ್ ಪಣಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಿದರು.
ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಶಬ್ದಮಾಲಿನ್ಯವಿರುವ ದೇಶ ಭಾರತವಾಗಿದೆ. ದೌರ್ಭಾಗ್ಯ ವಶಾತ್ ನಮ್ಮ ಜನ ಈ ಬಗ್ಗೆ ಜಾಗೃತರಾಗದೇ ಇರುವುದು ಇದಕ್ಕೆ ಪ್ರದಾಕಾರಣ ಎಂದು ಡಾ.ಸಿ.ಜಾನ್ ಪಣಿಕ್ಕರ್ ಈ ಸಂದರ್ಭ ಅಭಿಪ್ರಾಯಪಟ್ಟಿದ್ದಾರೆ.
ಉದ್ದಿಮೆ ವಲಯದಲ್ಲಿ ಮಂಜೂರು ಮಾಡಿರುವ ಶಬ್ಧ ಪರಿಧಿ 75 ಡೆಸಿಬೆಲ್ ಆಗಿದೆ. 115 ಡೆಸಿಬೆಲ್ ಗಿಂತಲೂ ಅಧಿಕ ಪ್ರಮಾಣದ ಸದ್ದು ಹೊಂದಿರುವ ವಾಹನಗಳ ಹಾರ್ನ್ ನಮ್ಮ ದೇಶದಲ್ಲಿ ಬಳಕೆಯಲ್ಲಿವೆ. ಸಾಧಾರಣ ಗತಿಯಲ್ಲಿ ನಡೆಸುವ ಮಾತುಕತೆ 45ರಿಂದ 50 ಡೆಸಿಬೆಲ್ ಇರುತ್ತದೆ. ತಾಸುಗಟ್ಟಲೆ 75 ಡೆಸಿಬೆಲ್ ಗಿಂತ ಅಧಿಕ ಪ್ರಮಾಣದ ಶಬ್ಧ ಕೇಳುವುದು ಅಪಾಯಕರವಾಗಿದೆ. ನಿಗದಿತ ಪ್ರಮಾಣಕ್ಕಿಂತ ಅಧಿಕ ಸದ್ದು ಕೇಳಿಸಿಕೊಳ್ಳುವುದು ದೇಹದಲ್ಲಿ ಒತ್ತಡ ತರುವ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಇದರಿಂದ ರಕ್ತದೊತ್ತಡ , ಅಸಿಡಿಟಿ, ನಿದ್ರೆ ಹೀನತೆ ಇತ್ಯಾದಿಗಳು ಅಧಿಕವಾಗುವುದಕ್ಕೆ ಕಾರಣವಾಗುತ್ತವೆ. ಇದು ಕ್ರಮೇಣ ಹೃದ್ರೋಗ, ಪಾಶ್ರ್ವ ವಾಯು ಇತ್ಯಾದಿಗಳೂ ಕದತೆರೆಯುತ್ತವೆ ಎಂದು ಅವರು ವಿವರಿಸಿದರು. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿದರ್ಧಕ ಇತ್ಯಾದಿಗಳ ಬಳಕೆಯಿಂದ ಮಕ್ಕಳ ಮೇಲೆ ಅತಿ ಪ್ರಮಾಣದಲ್ಲಿ ಅಡ್ಡಪರಿಣಾಮಬೀರುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದರು. ಇಂಥಾ ಗಂಭೀರ ಹಿನ್ನೆಲೆಗಳಿಂದಾಗಿ ಜಿಲ್ಲಾಡಳಿತದ ನೇತೃತ್ವದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ತಾಲೂಕು ಮಟ್ಟದಲ್ಲಿ ಜಾಗೃತಿ ತರಗತಿಗಳು, ವೈದ್ಯಕೀಯ ಶಿಬಿರಗಳು ಇತ್ಯಾದಿ ನಡೆಯಲಿವೆ ಎಂದವರು ನುಡಿದರು.
ಸಭೆಯಲ್ಲಿ ಪೀಡಿಯಾಟ್ರಿಕ್ ಅಕಾಡೆಮಿ ಕಾರ್ಯದರ್ಶಿ ಟಿ.ವಿ.ಪದ್ಮನಾಭನ್ ಉಪಸ್ಥಿತರಿದ್ದರು.
ವಿಶೇಷತೆ:
.......................
ಸತತ ಇಯರ್ ಫೋನ್ ಬಳಕೆಯಿಂದ ಅಪಾಯ:
ತಾಸುಗಟ್ಟಲೆ ಇಯರ್ ಫೋನ್ ಬಳಸುವುದು ಮಹಾ ಅಪಯಕಾರಿ ಅಭ್ಯಾಸ ಎಂದು ಡಾ.ಸಿ.ಜಾನ್ ಪಣಿಕ್ಕರ್ ಅಭಿಪ್ರಾಯಪಡುತ್ತಾರೆ. ಶಾಲಾ ಮಕ್ಕಳಲ್ಲೂ ಈ ಕ್ರಮ ವ್ಯಾಪಕವಾಗಿ ಕಂಡುಬರುತ್ತಿರುವುದು ದುರಾದೃಷ್ಟಕರ ಎಂದವರು ನುಡಿದಿದ್ದಾರೆ. ಇಯರ್ ಫೋನ್ ಮೂಲಕ ಸಂಗೀತ ಆಲಿಸುವುದಾಗಿದ್ದರೂ ಭವಿಷ್ಯದಲ್ಲಿ ಕೇಡಾಗಿ ಪರಿಣಮಿಸುವ ಭೀತಿಯಿದೆ. 75 ಡೆಸಿಬಲ್ ವರೆಗಿನ ಇಯರ್ ಫೋನ್ ನಲ್ಲಿ ಶಬ್ದ ಕೇಳಿಸಿಕೊಳ್ಳುವುದು ಅಪಾಯಕಾರಿಯಲ್ಲದೇ ಇದ್ದರೂ, 50 ಡೆಸಿಬಲ್ ವರೆಗಿನ ಸದ್ದನ್ನು ತಾಸುಗಟ್ಟಲೆ ಆಲಿಸುವುದು ಸಮಸ್ಯೆಗೆ ಕಾರಣವಾದೀತು ಎಂದವರು ಎಚ್ಚರಿಕೆ ನೀಡುತ್ತಾರೆ.
ಅಧಾರ್ಂಶ ಶ್ರವಣದೋಷದ ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ಭಾರತದಲ್ಲಿ ಅಧಿಕವಾಗುತ್ತಿದೆ ಎಂದು ಡಾ.ಜಾನ್ ಪಣಿಕ್ಕರ್ ತಿಳಿಸುತ್ತಾರೆ. ಇದು ಜೀವನಶೈಲಿಯಲ್ಲಿ ಬಂದ ಬದಲಾವಣೆಯ ಪರಿಣಾಮ. ಈ ಬಗ್ಗೆ ತುಂಬ ಎಚ್ಚರ ಅಗತ್ಯ ಎಂದವರು ನುಡಿಯುತ್ತಾರೆ. ದೋಷ ತಲೆದೋರಿದ ಮೊದಲ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ದೋಷಪರಿಹಾರ ಸಾಧ್ಯ ಎಂದರು.
ನವಜಾತ ಶಿಶುಗಳಲ್ಲಿ ಶ್ರವಣದೋಷ ಇದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವುದು ಇಂದಿನ ಅನಿವಾರ್ಯ.ಸರಕಾರಿ ಜನರಲ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಇತ್ಯಾದಿ ಕಡೆ ಈ ನಿಟ್ಟಿನಲ್ಲಿ ಉಚಿತ ರೂಪದ ಸ್ಕ್ರೀನಿಂಗ್ ಟೆಸ್ಟ್ ಸೌಲಭ್ಯಗಳಿವೆ.ಇದನ್ನು ಎಲ್ಲರೂ ಸದುಪಯೋಗ ಪಡಿಸಬೇಕು ಎಂದವರು ಹೇಳಿದರು.
ದೇಶದಲ್ಲೇ ಪ್ರಥಮಬಾರಿಗೆ ಸಮಗ್ರ ಅಧ್ಯಯನ:
ಶಬ್ದ ಮಾಲಿನ್ಯವು ಸಮಾಜದ ವಿವಿಧ ವಲಯಗಳನ್ನು ಹೇಗೆ ಸೆಳೆಯುತ್ತದೆ ಎಂಬ ಬಗ್ಗೆ ಕೇರಳ ವಿವಿಯ ಸಹಕಾರದೊಂದಿಗೆ ಎನ್.ಐ.ಎಸ್.ಎಸ್. ಆಳವಾದ ಅಧ್ಯಯನ ನಡೆಸಲಿದೆ ಎಂದು ಡಾ.ಜೋನ್ ಪಣಿಕ್ಕರ್ ತಿಳಿಸಿದರು. ನಗರಗಳಲ್ಲಿ ಹಾದಿಬದಿ ವ್ಯಾಪಾರಿಗಳು, ಸಂಚಾರಿ ಪೊಲೀಸರು, ವಿದ್ಯಾರ್ಥಿಗಳು ಮೊದಲಾದವರ ಸಹಭಾಗಿತ್ವದಲ್ಲಿ ಸಮಗ್ರ ಅಧ್ಯಯನ ನಡೆಯಲಿದೆ. ದೇಶದಲ್ಲಿ ಪ್ರಥಮ ಬಾರಿಗೆ ಹೀಗೊಂದು ಅಧ್ಯಯನ ನಡೆಸಲಾಗುತ್ತದೆ ಎಂದವರು ವಿವರಿಸಿದರು.

