ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯಲ್ಲಿರುವ ಬಡ್ಸ್‍ಸ್ಕೂಲ್‍ನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸದೆ ಆಡಳಿತ ವರ್ಗವು ತೋರುವ ಅವಗಣನೆಗೆದುರಾಗಿ ಬಿಜೆಪಿ ಹೋರಾಟಕ್ಕೆ ತಯಾರಿ ನಡೆಸುತ್ತಿದೆ ಎಂದು ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷರಾದ ಬಿ.ರಾಜೇಶ್ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮವ್ವಾರಿನ ಪಕ್ಷದ ಕಛೇರಿಯಲ್ಲಿ ನಡೆದ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಕಾರ್ಯದರ್ಶಿ ಶಶಿಧರ ತೆಕ್ಕೇಮೂಲೆ ಉಪಸ್ಥಿತರಿದ್ದರು. ಎಂಡೋಸಲ್ಫಾನ್ ರೋಗ ಬಾಧಿತ ಮಕ್ಕಳಿಗೆ ಉಪಕಾರಪ್ರದವಾಗಲಿರುವ ಈ ಬಡ್ಸ್ ಸ್ಕೂಲ್‍ಗೆ ಅಗತ್ಯವಿರುವ ಕಟ್ಟಡವನ್ನು ಕರುವಲ್ತಡ್ಕ ಎಂಬಲ್ಲಿ 1.10 ಕೋಟಿ ರೂ ವೆಚ್ಚದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಇದರ ಉದ್ಘಾಟನೆಯನ್ನು ನಡೆಸದೆ ಸಂಬಂಧ ಪಟ್ಟವರು ಅವಗಣನೆಯನ್ನು ತೋರಿದಾಗ ಬಿಜೆಪಿ ನಿರಂತರ ಹೋರಾಟವನ್ನು ಕೈಗೊಂಡಿತ್ತು. ಬಿಜೆಪಿಯ ಹೋರಾಟಕ್ಕೆ ಮಣಿದು ಅಧಿಕೃತರು ಕಳೆದ 6 ತಿಂಗಳ ಹಿಂದೆ ಉದ್ಗಾಟನೆಯನ್ನು ನಡೆಸಿದರು. ಮಾತ್ರವಲ್ಲದೆ ನೌಕರರನ್ನೂ ನೇಮಕಗೊಳಿಸಲಾಗಿತ್ತು. ನೇಮಕಗೊಂಡಿರುವ ನೌಕರರು ದಿನಾ ಬಂದು ಸಹಿ ಹಾಜರು ಹಾಕಿ ಸಂಬಳ ಪಡೆಯುವುದಲ್ಲದೆ ಮಕ್ಕಳನ್ನು ಕಂಡುಹಿಡಿದು ಕೇಂದ್ರಕ್ಕೆ ತಲುಪಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇದೀಗ ನೇಮಕಗೊಂಡಿರುವ ನೌಕರರು ತಿಂಗಳಿಗೆ ಒಂದು ಲಕ್ಷಕ್ಕಿಂತಲೂ ಮೇಲ್ಪಟ್ಟ ಮೊತ್ತ ಸಂಬಳವಾಗಿ ಪಡೆಯುತ್ತಿದ್ದಾರೆ. ಸರ್ಕಾರದ ಹಣ ಅನಾವಶ್ಯಕವಾಗಿ ಖರ್ಚಾಗುತ್ತಿದ್ದು, ಜನತೆಗೆ ಯಾವುದೇ ಪ್ರಯೋಜನವು ಇಲ್ಲದಂತಾಗಿದೆ. ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯೂ ಕಣ್ಣಿದ್ದು ಕುರಡರಂತೆ ವರ್ತಿಸುತ್ತಿದೆ. ಈ ಕುರಿತು ಸಂಬಂಧಪಟ್ಟವರು ಕೂಡಲೇ ಪರಿಹಾರವನ್ನು ಕಂಡುಕೊಳ್ಳಬೇಕೆಂದೂ ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ಹೋರಾಟದ ಫಲವಾಗಿ ಆರೋಗ್ಯಕೇಂದ್ರದ ಕಟ್ಟಡಗಳ ಉದ್ಘಾಟನೆ :
ಕುಂಬ್ಡಾಜೆ ಗ್ರಾಮಪಂಚಾಯಿತಿಯಲ್ಲಿರುವ ಆರೋಗ್ಯಕೇಂದ್ರಗಳ ಕಟ್ಟಡಗಳ ಉದ್ಘಾಟನೆ ವಿಳಂಬಗೊಂಡ ಕಾರಣ ಬಿಜೆಪಿ ನಿರಂತರ ಹೋರಾಟವನ್ನು ನಡೆಸಿತ್ತು. ಫಲವಾಗಿ ಇತ್ತೀಚೆಗೆ ಆ ಕಟ್ಟಡಗಳೆಲ್ಲಾ ಲೋಕಾರ್ಪಣೆಗೊಂಡು ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಬಡ್ಸ್ ಸ್ಕೂಲ್‍ನ ವಿಚಾರದಲ್ಲೂ ಅದಕ್ಕೊಂದು ಪರಿಹಾರವನ್ನು ಕಾಣುವ ತನಕ ಹೋರಾಟವನ್ನು ನಡೆಸುವುದಾಗಿ ಬಿ. ರಾಜೇಶ್ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


