ಮುಳ್ಳೇರಿಯ: ಬೇಕಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಪಾಠ ಮಾಡಲು ರಾಜ್ಯ ಲೋಕ ಸೇವಾ ಆಯೋಗ (ಪಿಎಸ್‍ಸಿ) ನೇಮಕ ಗೊಳಿಸಿದ್ದ ಕನ್ನಡ ಅರಿಯದ ತಿರುವನಂತಪುರ ನಿವಾಸಿಯಾದ ಶಿಕ್ಷಕಿ ಅನ್ವಿ ಬಿ.ದಾಸ್ ಸೋಮವಾರ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಲು ಯತ್ನಿಸಿದ್ದು, ವಿದ್ಯಾರ್ಥಿಗಳು, ಪೆÇೀಷಕರು, ಕನ್ನಡ ವಿದ್ಯಾರ್ಥಿ ಸಂರಕ್ಷಣ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆ ನಡೆಸಿ ತಡೆಹಿಡಿದು ಶಾಲಾ ಆವರಣ ಪ್ರವೇಶಿಸದಂತೆ ನಿಬರ್ಂಧಿಸುವಲ್ಲಿ ಯಶಸ್ವಿಯಾದರು. ಕನ್ನಡ ತಿಳಿಯದ ಶಿಕ್ಷಕಿ ಶಾಲಾ ಆವರಣ ಪ್ರವೇಶಿಸ ಕೂಡದೆಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ, ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ನಿರತರಾಗಿದ್ದವರು ಶಾಲಾ ಮುಖ್ಯೋಪಾಧ್ಯಾಯರನ್ನು ವಿನಂತಿಸಿ ಈ ಅಧ್ಯಾಪಕನಿಗೆ ತರಗತಿ ನಡೆಸಲು ಬಿಡುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು.
ಈ ಶಾಲೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ನೂರ ಇಪ್ಪತ್ತಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದು, ತೆರವಾಗಿರುವ ಸಮಾಜ ವಿಜ್ಞಾನ ಪಠ್ಯಕ್ಕೆ ರಾಜ್ಯ ಲೋಕಸೇವಾ ಆಯೋಗ ಮಲೆಯಾಳ ಭಾಷೆ ಮಾತ್ರ ಬಲ್ಲ ಶಿಕ್ಷಕಿಯನ್ನು ನೇಮಕಗೊಳಿಸಿತ್ತು. ಕಳೆದ ಶುಕ್ರವಾರವೇ ಅವರು ಕರ್ತವ್ಯಕ್ಕೆ ಹಾಜರಾಗಿದ್ದು, ಅಂದು ಪ್ರತಿಭಟನೆಗೈದು ತರಗತಿ ಬಹಿಷ್ಕರಿಸಲಾಗಿತ್ತು. ಬಳಿಕ ಶಾಲಾ ಕಳೊತ್ಸವದ ಹಿನ್ನೆಲೆಯಲ್ಲಿ ತರಗತಿಗಳು ನಡೆದಿರಲಿಲ್ಲ. ಆ ಬಳಿಕ ಸೋಮವಾರ ಅದೇ ಶಿಕ್ಷಕಿ ಮತ್ತೆ ಶಾಲೆಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಗೇಟಿನ ಬಳಿ ತಡೆದರು. ಬಳಿಕ ತರಗತಿ ಬಹಿಷ್ಕರಿಸಿದರು. ಕನ್ನಡ ಬಲ್ಲ ಶಿಕ್ಷಕರು ಆಗಮಿಸುವ ತನಕ ತರಗತಿ ನಡೆಸಬಾರದೆಂದು ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರಿಗೆ ಮನವಿ ನೀಡಿರುವರು. ಶಾಲಾ ರಕ್ಷಕ ಶಿಕ್ಷಕ ಸಂಘ ನಾಳೆ(ಬುಧವಾರ)ವಿಸ್ಕøತ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗೆ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಬೆಂಬಲ ಸೂಚಿಸಿದ್ದು, ನ್ಯಾಯ ಪಾಲಿಸುವಂತೆ ಅಧಿಕೃತರನ್ನು ಒತ್ತಾಯಿಸಿದೆ.
ಕಳೆದ ಶುಕ್ರವಾರ ಬೇಕಲ ಶಾಲೆಯ ಜೊತೆಗೆ ಉದುಮ ಸರ್ಕಾರಿ ಶಾಲೆಗೂ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಪಠ್ಯ ಬೋಧನೆಗೆ ಸಂಪೂರ್ಣ ಅಂಧನಾಗಿರುವ, ಕನ್ನಡ ಲವಲೇಶವೂ ಬಾರದ ಮಲೆಯಾಳಿ ಶಿಕ್ಷಕನನ್ನು ನೇಮಿಸಿದ್ದರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಸೋಮವಾರವೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅಲ್ಪಹೊತ್ತು ಪ್ರತಿಭಟನೆ ನಡೆಸಿ ತರಗತಿಗೆ ವಾಪಸಾದರು. ಆದರೆ ಮಲೆಯಾಳಿ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ.


