ಮುಳ್ಳೇರಿಯ: ಹೈಸ್ಕೂಲು ವಿಭಾಗದ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಶಿಕ್ಷಕ ಹುದ್ದೆಗೆ ಕೇರಳ ಲೋಕಸೇವಾ ಆಯೋಗ ನೇಮಕಾತಿಗೊಳಿಸಿರುವ ಕನ್ನಡ ಬಾರದ ಮಳೆಯಾಳಿ ಶಿಕ್ಷಕಿಯನ್ನು ಶಾಲೆಗೆ ಬಾರದಂತೆ ತಡೆಹಿಡಿದ ಬೇಕಲ ಫಿಶರೀಸ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಂದಿನ ಯೋಜನೆಯ ಬಗ್ಗೆ ರೂಪುರೇಷೆ ತಯಾರಿಸಲು ವಿಶೇಷ ಸಭೆ ಶುಕ್ರವಾರ ಶಾಲೆಯಲ್ಲಿ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘ, ಮಕ್ಕಳ ಹೆತ್ತವರು ಹಾಗೂ ವಿದ್ಯಾರ್ಥಿಗಳು ಸಭೆಯ ನೇತೃತ್ವ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ, ಉಪಾಧ್ಯಕ್ಷ ರಾಜೇಶ್, ಹೆತ್ತರಾದ ವಾಸುದೇವ ಬಟ್ಟತ್ತೂರು, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ., ಶಿಕ್ಷಕಿಯರಾದ ರಜನೆ ಕೆ,. ಅನಿತಾ ಟೀಚರ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ, ಲೋಕಸೇವಾ ಆಯೋಗದ ನಿಲುವನ್ನು ಖಂಡಿಸಿದರು.
ಮುಂದಿನ ದಿನಗಳಲ್ಲಿ ಯಾವ ಕಾರಣಕ್ಕೂ ಕನ್ನಡಿಗರನ್ನು ಅವಗಣಿಸಿ ನಿರ್ಧಾರ ತಳೆಯದಂತೆ ಮತ್ತು ಈಗಾಗಲೇ ಮಾಡಿರುವ ಅಪ್ರಬುದ್ದ ನೇಮಕಾತಿಯ ಬಗ್ಗೆ ಮರುಪರಿಶೀಲಿಸುವಂತೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಹಾಗೂ ಜಿ.ಪಂ.ಅಧ್ಯಕ್ಷರಿಗೆ ಮನವಿ ನೀಡಲು ತೀರ್ಮಾನಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳ ಸುಗಮ ಕಲಿಕೆಗಾಗಿ ಕನ್ನಡಿಗರಾದ ಶಿಕ್ಷಕರೋರ್ವರನ್ನು ದಿನವೇತನದ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಲೋಕಸೇವಾ ಆಯೋಗವು ಕನ್ನಡಿಗರನ್ನು ಅವಗಣಿಸುವ ನಿರ್ಧಾರಗಳನ್ನು, ನೇಮಕಾತಿಗಳನ್ನು ಮಾಡಬಾರದು ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂತು.



