ಬದಿಯಡ್ಕ: ಮಾನ್ಯ ಜೆ.ಎ.ಎಸ್.ಬಿ. ಶಾಲೆಯಲ್ಲಿ ಕಲಿಯುತ್ತಿರುವ 2ನೇ ತರಗತಿ ವಿದ್ಯಾರ್ಥಿನಿ ಮಧುಮೇಹ ರೋಗದಿಂದ ಬಳಲುತ್ತಿರುವ ಫಾತಿಮತ್ ಅಸ್ಮೀನಳ ಉನ್ನತ ಚಿಕಿತ್ಸೆಗಾಗಿ ಸಂಗ್ರಹಿಸಲಾದ ಸಹಾಯಧನವನ್ನು ಆಕೆಯ ಹೆತ್ತವರಿಗೆ ಹಸ್ತಾಂತರಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘ, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗ, ಊರವರು ಬಾಲಕಿಯ ಹೆಸರಿನಲ್ಲಿ ಸಮಿತಿಯನ್ನು ರೂಪೀಕರಿಸಿ ಹಣಸಂಗ್ರಹಿಸಲಾಗಿತ್ತು. ತೀವ್ರ ತರದ ಅಸೌಖ್ಯದ ಕಾರಣ ಹೆಚ್ಚಿನ ಹಣದ ಅಗತ್ಯತೆಯಿತ್ತು. ಈ ನಿಟ್ಟಿನಲ್ಲಿ ಚಿಕಿತ್ಸೆಗಾಗಿ ಹಣಸಂಗ್ರಹಿಸಲು ಸಮಿತಿಯ ಹೆಸರಿನಲ್ಲಿ ಬೇಂಕ್ ಖಾತೆಯನ್ನು ತೆರೆಯಲಾಗಿತ್ತು. ಆ ಬ್ಯಾಂಕ್ ಖಾತೆಯಲ್ಲಿ ಒಟ್ಟು ಲಭಿಸಿದ 1,17,446 ರೂಪಾಯಿಯನ್ನು ಬಾಲಕಿಯ ಹೆತ್ತವರಿಗೆ ಸಮಿತಿಯ ಸಂಚಾಲಕ ಬದಿಯಡ್ಕ ಗ್ರಾಮಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ನೇತೃತ್ವವನ್ನು ಹಸ್ತಾಂತರಿಸಲಾಯಿತು. ಮಕ್ಕಳಲ್ಲಿ ಬಲು ಅಪರೂಪವಾಗಿ ಕಂಡುಬರುವ ಟೈಪ್ 1 ಮಧುಮೇಹದಿಂದ ಬಾಲಕಿ ಬಳಲುತ್ತಿದ್ದಾಳೆ. ಅಧ್ಯಾಪಕರು, ಊರವರು, ಮಸೀದಿಯ ಸಮಿತಿಯ ವತಿಯಿಂದಲೂ ಈ ಮೊದಲು ಸಹಾಯಧನವನ್ನು ನೀಡಲಾಗಿತ್ತು. ಸಂಗ್ರಹಿಸಲಾದ ಹಣವನ್ನು ಹಸ್ತಾಂತರಿಸುವುದರೊಂದಿಗೆ ಸಮಿತಿಯನ್ನು ಬರ್ಖಾಸ್ತು ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬೈರ್ ಬಾಪಾಲಿಪೊನಂ, ಅಧ್ಯಾಪಕಿ ಆಶ ಕರಣ್, ಸ್ಟಾಫ್ ಕಾರ್ಯದರ್ಶಿ ರೆಜು ಎಸ್.ಎಸ್., ಬಾಲಕಿಯ ತರಗತಿ ಅಧ್ಯಾಪಿಕೆ ಮಿನಿ ಜೋಸೆಫ್ ಜೊತೆಗಿದ್ದರು.


