ಕುಂಬಳೆ: ಕೇರಳ ಲೋಕ ಸೇವಾ ಆಯೋಗ(ಪಿ.ಎಸ್.ಸಿ.) ಮತ್ತೆ ಕನ್ನಡಿಗರ ಕತ್ತು ಹಿಸುಕುವ ಕೆಲಸ ಮಾಡಿದೆ. ಈ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ನಿರ್ಮೂಲನಗೊಳಿಸುವ ಷಡ್ಯಂತ್ರವನ್ನು ಮತ್ತೆ ಮುಂದುವರಿಸಿದೆ.
ನಿನ್ನೆ(ಅ.22 ಮಂಗಳವಾರ) ಕೇರಳ ಲೋಕ ಸೇವಾ ಆಯೋಗ ಕನ್ನಡ ಬಲ್ಲ ಉದ್ಯೋಗಾರ್ಥಿಗಳ ನೇಮಕಾತಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡಿಗರನ್ನು ವಂಚಿಸಿರುವುದು ತೀವ್ರ ಹತಾಶೇಗೆ ಕಾರಣವಾಗಿದೆ. ಪಿ.ಎಸ್.ಸಿ. ಅಧಿಸೂಚನೆ(ನೋಟಿಫಿಕೇಶನ್)ಯಲ್ಲಿ 1.15 ಗಂಟೆ ಕಾಲಾವಧಿಯ ಪರೀಕ್ಷೆಯಲ್ಲಿ 40 ಅಂಕ ಕನ್ನಡ, 40 ಅಂಕ ಮಲಯಾಳ ಮತ್ತು 20 ಅಂಕ ಇಂಗ್ಲೀಷ್ ಎಂಬಂತೆ ಪ್ರಶ್ನೆಗಳನ್ನು ನೀಡಲಾಗುವುದೆಂದು ಸೂಚಿಸಲಾಗಿತ್ತು. ಆದರೆ ಮಂಗಳವಾರ ನಡೆದ ಪರೀಕ್ಷೆಯಲ್ಲಿ ಇದಕ್ಕೆ ಬದಲಿಯಾಗಿ ಕನ್ನಡಕ್ಕೆ 20 ಅಂಕ, ಮಲಯಾಳಕ್ಕೆ 60 ಅಂಕ ಮತ್ತು ಇಂಗ್ಲೀಷ್‍ಗೆ 20 ಅಂಕ ಎಂಬಂತೆ ಪ್ರಶ್ನೆ ನೀಡಲಾಗಿದೆ. ಈ ಮೂಲಕ ಕನ್ನಡಿಗರನ್ನು ಸರ್ಕಾರಿ ಉದ್ಯೋಗದಿಂದ ವಂಚಿಸುವುದಕ್ಕಾಗಿ ಪಿಎಸ್‍ಸಿ ಮಾಡಿದ ಷಡ್ಯಂತ್ರ ಇದಾಗಿದೆ. ಈ ಕಾರಣದಿಂದ ಬಹುತೇಕ ಕನ್ನಡಿಗರಿಗೆ ಮಲಯಾಳ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಕನ್ನಡಿಗ ಉದ್ಯೋಗಾರ್ಥಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ.
ವ್ಯಾಕರಣ ಮಾತ್ರ:
ಕೇಳಲಾಗಿದ್ದ 20 ಕನ್ನಡ ಪ್ರಶ್ನೆಗಳೆಲ್ಲವೂ ವ್ಯಾಕರ ಸಂಬಂಧಿಯಾಗಿರುವುದೂ ವಿಶೇಷವಾಗಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ಗಮನಿಸಿದರೆ ಇದರ ಹಿಂದೆ ಭಾರೀ ದೊಡ್ಡ ವಂಚನೆ ನಡೆದಿರಬಹುದೆಂದು ಸಂಶಯಿಸಲಾಗಿದೆ. ಮಂಗಳವಾರ ನಡೆಸಲಾದ ಪರೀಕ್ಷೆಯು ವಿವಿಧ ಸರ್ಕಾರಿ ಇಲಾಖೆಗಳ ಸಾಮಾನ್ಯ ನೌಕರ ನೇಮಕಾತಗಾಗಿ ಇರುವುದಾಗಿದ್ದು, ಕನಿಷ್ಠ ವಿದ್ಯಾರ್ಹತೆಯ ಕನ್ನಡ ವಿದ್ಯಾರ್ಥಿಗಳಿಗೆ ವ್ಯಾಕರಣ ವಿಚಾರಗಳು ಬಳಕೆಯಲ್ಲಿರಬೇಕೆಂದಿಲ್ಲ. ಈ ಕಾರಣದಿಂದ ಇದರ ಹಿಂದೆ ಷಡ್ಯಂತ್ರ ಇರಬಹುದೆಂದು ಶಂಕಿಸಲಾಗುತ್ತಿದೆ.
ಸರ್ಕಾರದ ಕನ್ನಡ ವಿರೋಧಕ್ಕೆ ಆಯೋಗದ ಬಳಕೆ ಇದೇ ಮೊದಲು:
ರಾಜ್ಯ ಎಲ್‍ಡಿಎಫ್ ಸರ್ಕಾರದ ಕನ್ನಡ ವಿರೋಧಿ ಧೋರಣೆ ದಿನಗಳದಂತೆ ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿದ್ದು ಇದೀಗ ಮೊದಲ ಬಾರಿಗೆ ಲೋಕಸೇವಾ ಆಯೋಗವನ್ನು ಗುರಾಣಿಯಂತೆ ಬಳಸಿದೆ. ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಅನುಕೂಲವಾಗುವ ಕನ್ನಡ ಕ್ಲರ್ಕ್ ಹುದ್ದೆಗೆ ಕಾಸರಗೋಡು ಪರೀಕ್ಷಾ ಕೇಂದ್ರವಾಗಿ ಈ ಮೊದಲು ಆಯೋಗ ವಿಜ್ಞಾಪನ ಪತ್ರ ಹೊರಡಿಸಿತ್ತು. ಈ ಮಧ್ಯೆ ಪರೀಕ್ಷೆ ಹತ್ತಿರವಾಗುತ್ತಿರುವಂತೆ ಕಳೆದ ವಾರ ಆಯೋಗವು ಮತ್ತೆ ತುರ್ತು ಆದೇಶವೊಂದರ ಮೂಲಕ ಪರೀಕ್ಷಾ ಕೇಂದ್ರವನ್ನು ಕಣ್ಣೂರು ಜಿಲ್ಲೆಗೆ ಸ್ಥಳಾಂತರಿಸಿರುವುದು ಸರ್ಕಾರ ಮತ್ತು ಆಯೋಗದ ಕನ್ನಡ ಧಮನ ನೀತಿಯ ಪ್ರತೀಕವಾಗಿದೆ ಎನ್ನಬಹುದು.
60 ಅಂಕಗಳ ಮಲಯಾಳ ಪ್ರಶ್ನೆ ಪತ್ರಿಕೆಯ ಕಾರಣದಿಂದ ಮಲಯಾಳಿಗಳೇ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಕನ್ನಡಿಗರು ಉದ್ಯೋಗದಿಂತ ವಂಚಿತರಾಗಲಿದ್ದಾರೆ.
ಸಮಾಲೋಚನೆ ಸಭೆ :
ಪಿಎಸ್‍ಸಿ ವಂಚನೆಯ ಬಗ್ಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲು ಅ.25 ರಂದು ಮಧ್ಯಾಹ್ನ 2.30 ಕ್ಕೆ ಕಾಸರಗೋಡು ಬ್ಯಾಂಕ್ ರಸ್ತೆಯಲ್ಲಿರುವ ಕಾಸರಗೋಡು ಟುಟೋರಿಯಲ್ ಕಾಲೇಜಿನ ಗಂಗಾಧರ ಭಟ್ ವೇದಿಕೆಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಉದ್ಯೋಗಾರ್ಥಿಗಳು ಹಾಗು ಭಾಷಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಅಭಿಮತ:
ಲೋಕಸೇವಾ ಆಯೋಗವನ್ನು ಬಳಸಿ ಕನ್ನಡ ವಿರೋಧಿ ಧಮನ ನೀತಿಯನ್ನು ಜಾರಿಗೊಳಿಸಿರುವುದು ಹೇಯಕರವಾದುದಾಗಿದೆ. ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದಂತೆ ವಿವಿಧ ಇಲಾಖೆಗಳ ಸಾಮಾನ್ಯ ನೌಕರರ ನೇಮಕಾತಿಗೆ ಲೋಕಸೇವಾ ಆಯೋಗವು ಕನ್ನಡ ಭಾಷೆಯ ಫ್ರೌಢಿಮೆಯ ಪರಿಶೀಲನೆಗೆ ಒಂದು ಗಂಟೆಗಳ ಕನ್ನಡ ಭಾಷೆಯಲ್ಲೇ ಪರೀಕ್ಷೆ ನಡೆಸಬೇಕೆಂಬ ಆದೇಶವಿದೆ. ಆದರೆ ಏಕಾಏಕಿ ಮಲೆಯಾಳಿಗರನ್ನು ತುರುಕಲು ಹವಣಿಸುವ ಕುತ್ಸಿತ ಮನೋಸ್ಥಿತಿಯು ಮಂಗಳವಾರದ ಘಟನೆಯಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಹೋರಾಟದ ಮೂಲಕ ಚುರುಕು ಮುಟ್ಟಿಸಬೇಕಿದೆ. ಕನ್ನಡಿಗರು ಒಗ್ಗಟ್ಟಿನಿಂದ ಉಪ ಭಾಷೆ, ರಾಜಕೀಯಗಳನ್ನು ಮರೆತು ಅ.25 ರಂದು ನಡೆಯುವ ತುರ್ತು ಸಮಾಲೋಚನ ಸಭೆಗೆ ಆಗಮಿಸಿ ಸಲಹೆಗಳನ್ನು ನೀಡಬೇಕು.
ನ್ಯಾಯವಾದಿ.ಮುರಳೀಧರ ಬಳ್ಳುಕ್ಕುರಾಯ
ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ.ಕಾಸರಗೋಡು.


