ಬದಿಯಡ್ಕ: ಕುಂಬ್ಡಾಜೆ ಬಳ್ಳಪದವು ನಾರಾಯಣೀಯಂ ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ಭಾನುವಾರ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಕೃಷ್ಣಾರ್ಪಣಂ ಸಂಗೀತ ಕಾರ್ಯಕ್ರಮ ಜರಗಿತು. ವೀಣಾವಾದಿನಿ ವಿದ್ಯಾರ್ಥಿಗಳು ಸಂಗೀತದೊಂದಿಗೆ ಹಾಗೂ ವೈದಿಕ ಶ್ರೇಷ್ಠರು ಮಂತ್ರಘೋಷದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಗೀತ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಶ್ರೀಗಳವರಿಗೆ ಫಲಪುಷ್ಪಗಳನ್ನಿತ್ತು ಆಶೀರ್ವಾದವನ್ನು ಪಡೆದುಕೊಂಡರು. ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿತು.
ಬ್ರಹ್ಮಶ್ರೀ ಕನ್ಯಾಕುಮಾರಿ ಕೃಷ್ಣನ್ ಅವರ ನೇತೃತ್ವದಲ್ಲಿ ಶ್ರೀ ಚಕ್ರಾಬ್ಜ ಪೂಜೆ, ಬ್ರಹ್ಮಶ್ರೀ ಮುಂಡೋಡು ರಾಧೇಶ್ಯಾಂ ಭಟ್ ಅವರ ನೇತೃತ್ವದಲ್ಲಿ ಲಕ್ಷಾರ್ಚನೆ, ಬ್ರಹ್ಮಶ್ರೀ ವೆಂಕಟೇಶ್ವರ ಪ್ರಸಾದ ಕೂವೆಕ್ಕಲ್ಲು ಮತ್ತು ವೈದಿಕ ಶ್ರೇಷ್ಠರಿಂದ ನವಗ್ರಹ ಶಾಂತಿ ಮತ್ತು ರುದ್ರಹೋಮ ಜರಗಿತು. ವೀಣಾವಾದಿನಿ ತಂಡದಿಂದ ನವಗ್ರಹ ಕೃತಿ ಆಲಾಪನೆ ನಡೆಯಿತು. ಮಧ್ಯಾಹ್ನ ಮಂಗಳ ನೀರಾಜನಂ, ಭೋಜನ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ನೂರಾರು ಮಂದಿ ವೈದಿಕರು, ಊರವರು, ಸಂಗೀತ ವಿದ್ಯಾರ್ಥಿಗಳು, ಪಾಲಕರು, ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



