ಕಾಸರಗೋಡು: ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರ ವತಿಯಿಂದ ಮಂಗಳವಾರ ನಡೆದ ವೃದ್ಧರ ಸಂಗಮ ಜನ ಮನ್ನಣೆಗೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪ್ರಜೆಗಳು ಮತ್ತೊಮ್ಮೆ ಮಕ್ಕಳಾಗಿ, ಆಟವಾಡಿ, ಹಾಡುತ್ತಾ, ಕುಣಿಯುತ್ತಾ, ಪರಸ್ಪರಅನುಭವ ಹಂಚಿಕೊಳ್ಳುತ್ತಾ ಅಪರೂಪವಾಗಿ ಈ ದಿನವನ್ನು ಆಚರಿಸಿಕೊಂಡರು.
ಹಿರಿಯರಾದ ಮಾಣಿಕ್ಯಂ, ಸುಹರಾ, ಸುಲೈಖಾ, ಮಿಸ್ರಿಯಾ, ಪಿ.ಕೆ.ಅಬ್ದುಲ್ಲ ಎಂಬವರು ಹಾಡು ಹಾಡಿ ರಂಜಿಸಿದರು. ಹಾಸ್ಯ ಕಲಾವಿದ ಸುರೇಂದ್ರನ್ ತೋಲೇರಿ ಅವರಿಂದ ಜಾನಪದ ಹಾಡುಗಳ ಗಾಯನ, ಮಿಮಿಕ್ರಿ ಇತ್ಯಾದಿ ನಡೆಯಿತು. ಸಮಾರಂಭ ಅಂಗವಾಗಿ ಅರಾಫತ್ ನಗರದ ದಿ.ಅರಕತ್ತಿ ಮಹಮ್ಮದ್ ಎಂಬವರ ಪತ್ನಿ ಶತಾಯುಷಿ 105ರ ಹರೆಯದ ಆಯಿಷಾ ಉಮ್ಮ, ಕೋಟೆ ವಳಪ್ ನಿವಾಸಿ ದಿ.ಕೃಷ್ಣನ್ ಅವರ ಪತಿಸರೋಜಿನಿ(90 ವರ್ಷ) ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ಶಿಬಿರ, ನೇತ್ರ ತಪಾಸಣೆ, ಜೀವನಶೈಲಿ ರೋಗ ಪತ್ತೆ, ಜನಜಾಗೃತಿ, ಉಚಿತ ಔಷಧ ವಿತರಣೆ ಇತ್ಯಾದಿ ನಡೆಯಿತು.
ವೈದ್ಯಾಧಿಕಾರಿ ಡಾ.ನಾಸ್ಮಿನ್ ಜೆ.ನಜೀರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿರಿಯ ವ್ಯಕ್ತಿಗಳನ್ನು ಗೌರವಿಸುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುವುದರ ಜತೆಗೆ ಹಿರಿಯರ ಅನುಭವಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುವುದಾಗಿ ತಿಳಿಸಿದರು. ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜೂನಿಯರ್ ಎಚ್.ಐ.ಎ.ಪಿ.ಸುರೇಂದ್ರನ್, ಕುಟುಂಬಶ್ರೀ ಸಿ.ಡಿ.ಎಸ್. ಅಧ್ಯಕ್ಷೆ ನಜ್ಮಾ ಖಾದರ್,ಮಾಹಿನ್ ಕುನ್ನಿಲ್ ಮೊದಲಾದವರು ಉಪಸ್ಥಿತರಿದ್ದರು. ಜೆ.ಎಚ್.ಐ.ರಾಜೀವ್ ರಾಘವನ್, ಜೆ.ಪಿ.ಎಚ್.ಎನ್. ಗಳಾದ ರಾಜಿ, ಸುಲೈಖಾ, ಪಾಲಿಯೇಟಿವ್ ನರ್ಸ್ ಸಜಾತಾ, ಒಪ್ಟೋಮಿಟ್ರಿಸ್ಟ್ ಶಶಿಕಲಾ, ಫಾರ್ಮಸಿಸ್ಟ್ ರತೀಶ್, ಆಶಾ ಕಾರ್ಯಕರ್ತೆಯರಾದ ರಾಧಾಮಣಿ, ಮಿಸ್ರಿಯಾ, ಆಶಾ, ಶೈಲಜಾ, ಇಂದಿರಾ, ಕರೀಂ ಚೌಕಿ ಮೊದಲಾದವರು ನೇತೃತ್ವ ವಹಿಸಿದ್ದರು.

