ಬದಿಯಡ್ಕ: ಭಜನೆ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗ. ಭಜನಾ ಸತ್ಸಂಪ್ರದಾಯವನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುವುದು ಉತ್ತಮ ವಿಚಾರ ಎಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ, ಧಾರ್ಮಿಕ ಮುಂದಾಳು ಟಿ.ಕೆ. ನಾರಾಯಣ ಭಟ್ ಪಂಜಿತ್ತಡ್ಕ ಹೇಳಿದರು.
ಅವರು ಬದಿಯಡ್ಕ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವತಿಯಿಂದ ದೇವಸ್ಥಾನದಲ್ಲಿ 'ರಂಗಸಿರಿ ಭಜನಾ ಚಾವಡಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಮಾತಾಡಿ, ಭಜನೆಯಿಂದ ನಮ್ಮಲ್ಲಿ ಸಕಾರಾತ್ಮಕ ಚೈತನ್ಯ ವೃದ್ಧಿಯಾಗುತ್ತದೆ. ದಶಮಾನದ ಸಂಭ್ರಮದಲ್ಲಿರುವ ರಂಗಸಿರಿಯ ಚಟುವಟಿಕೆಗಳು ಇನ್ನಷ್ಟು ಸಮಾಜಮುಖಿಯಾಗಿ ಬೆಳೆಯಲು, ಶಕ್ತಿ ತುಂಬಲು ಈ ಭಜನಾ ಸೇವೆಯಿಂದ ಸಾಧ್ಯ ಎಂದರು. ವಿದ್ಯಾರ್ಥಿನಿ ಅನ್ವಿತಾ ತಲ್ಪನಾಜೆ ಪ್ರಾರ್ಥಿಸಿದರು. ಸುಶೀಲ ಪದ್ಯಾಣ ಸ್ವಾಗತಿಸಿದರು. ರಂಗಸಿರಿಯ ಭಜನೆ, ಸುಗಮ ಸಂಗೀತ ಶಿಕ್ಷಕಿ ಡಾ.ಸ್ನೇಹಾಪ್ರಕಾಶ್ ಪೆರ್ಮುಖ ವಂದಿಸಿದರು. ಸುಬ್ರಹ್ಮಣ್ಯ ಭಟ್ ಚಂಬಲ್ತಿಮಾರ್ ನಿರೂಪಿಸಿದರು. ವಿದ್ಯಾರ್ಥಿಗಳಾದ ಧನ್ಯಶ್ರೀ, ನವ್ಯಶ್ರೀ, ಶ್ರೀಲಕ್ಷ್ಮಿ, ಅನ್ವಿತಾ, ಸಮನ್ವಿತಾ, ಶತೋದರಿ, ಸಮನ್ವಿ, ತಸ್ಮೈ, ಚಂದನ್, ಸೃಜನ್ ಕೇಶವ, ಸುಮೇಧ ಹಾಗೂ ದೀಪ್ತಿ ಭಜನಾಸೇವೆಯಲ್ಲಿ ಪಾಲ್ಗೊಂಡರು. ಮೃದಂಗದಲ್ಲಿ ವಿಶ್ವಾಸ್ ಪದ್ಯಾಣ ಸಹಕರಿಸಿದರು.
"ರಂಗಸಿರಿ ಭಜನಾ ಚಾವಡಿ" : ಭಜನಾ ಸ್ಪರ್ಧೆಗಳಲ್ಲಿ ಬಹುಮಾನ ತನ್ನದಾಗಿಸಿಕೊಂಡ ರಂಗಸಿರಿಯ ತಂಡವು ತಿಂಗಳಿಗೊಮ್ಮೆ ನಡೆಸುವ ಭಜನಾ ಕಾರ್ಯಕ್ರಮ. ವಿದ್ಯಾರ್ಥಿಗಳು ತಾವು ಕಲಿತ ಕೀರ್ತನೆ, ಉಗಾಭೋಗ, ಸುಳಾದಿ, ವಚನ ಇತ್ಯಾದಿ ಪ್ರಕಾರದ ಭಜನೆಗಳನ್ನು ತಮ್ಮ ಸ್ವಂತಿಕೆಯೊಂದಿಗೆ ಕ್ಷೇತ್ರದಲ್ಲಿ ಹಾಡುವರು. ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಕಾರ್ಯಕ್ರಮ ಇದಾಗಿದೆ.





