ಪೆರ್ಲ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಅ.21 ರಂದು ನಡೆಯಲಿರುವ ಉಪ ಚುನಾವಣೆಯ ಬಿಸಿಯಲ್ಲೇ ಕೇರಳ ವಾಟರ್ ಅದೋರಿಟಿಯಿಂದ ಕುಡಿ ನೀರು ಸರಬರಾಜಿನ ಬಿಲ್ಲು ಎಣ್ಮಕಜೆ ಗ್ರಾ.ಪಂ.ಬಜಕ್ಕೂಡ್ಲು ದೇವಾಲಯ ಪರಿಸರದ (15ನೇ ವಾರ್ಡಿನ) ಹಲವು ಮನೆಗಳನ್ನು ಆತಂಕ್ಕಕ್ಕೀಡು ಮಾಡಿದೆ.
ಕಡು ಬೇಸಗೆಯಲ್ಲಿ ಉಪಯೋಗಕ್ಕೆ ಲಭ್ಯವಾಗದ, ಮಳೆಗಾಲದ ಮೂರು ತಿಂಗಳಲ್ಲಿ ನಾಲ್ಕು ಬಾರಿಯೋ ಎರಡು ಬಾರಿಯೋ ಮನೆ ಬಾಗಿಲಿಗೆ ತಲುಪುವ ನೀರಿನ ಬಿಲ್ಲು ಸರಿ ಸುಮಾರು ಎರಡು, ಮೂರು, ಎಂಟು, ಹದಿನೈದು ಸಾವಿರದವರೆಗೆ ನಮೂದಿಸಲ್ಪಟ್ಟು ಜನತೆಯ ಬಾಗಿಲಿಗೆ ತಲುಪಿದ್ದು, ಉಪಯೋಗಸದೇ ಇದ್ದರೂ ನೀರಿನ ಬಿಲ್ ಈ ರೀತಿ ಬಂದುದರಿಂದ ಸಾರ್ವಜನಿಕರು ಆಕ್ರೋಶಿತಗೊಂಡಿದ್ದಾರೆ.
ಅಮಾಯಕ ಜನರಿಂದ ಹಣ ದೋಚುವ ಕೇರಳ ಸರ್ಕಾರದ ಗೋಳಿತ್ತಡ್ಕ ಕುಡಿನೀರು ವಿತರಣಾ ಯೋಜನೆ, "ಬಡವರ ಪರ ಸರ್ಕಾರ" ಎಂದು ಬಾಯಿ ಮಾತಿಗೆ ಮಾತ್ರ ಪ್ರಚಾರ ನಡೆಸಿ, ಬಡವರಿಂದ ಅಗತ್ಯಕ್ಕಿಂತ ಹೆಚ್ಚಾಗಿ ಹಣ ವಸೂಲು ಮಾಡುವ ಮೂಲಕ ಜನತೆಯ ರಕ್ತ ಹೀರುವ ಕಾರ್ಯ ಮಾಡುತ್ತಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಅವಲತ್ತುಕೊಂಡಿರುವರು. ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿದ್ದರೂ ಅದನ್ನು ನಿರ್ಲಕ್ಷಿಸುವ ಅಧಿಕೃತರು ಈ ರೀತಿ ಬಿಲ್ಲು ವಿತರಿಸಿದ್ದು ಜನತೆಗೆ ಗಾಯದ ಮೇಲೆ ಬರ ಎಳೆದಂತಾಗಿದೆ. ಸಾಧರಣ ಮೂರು ತಿಂಗಳಿಗೊಮ್ಮೆ ಮುನ್ನೂರು ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಈ ಬಾರಿ ಭರಿಸಲಾಗದ ಮೊತ್ತ ಬಂದಿರುವುದು ಹೇಗೆ ಎನ್ನುವುದು ಜನತೆಯ ಪ್ರಶ್ನೆ. ವರ್ಷ ಪೂರ್ತಿ ಲೆಕ್ಕ ಹಾಕಿದರೂ ಆಗುವುದು ಮೂರು ಸಾವಿರ ರೂ. ಹಾಗಿದ್ದರೆ ಪೈಪ್ ಲೈನ್ ಗಳು ಒಡೆದು ದಿನವಿಡೀ ಪೋಲಾಗುವ ನೀರಿನ ಬಾಬ್ತು ಈ ರೀತಿಯ ಮೊತ್ತ ವಸೂಲು ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರಿಗೆ ಕಾಡತೊಡಗಿದೆ. ಈ ಬಗ್ಗೆ ಸಂಬಂಧಪಟ್ಟವರು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜನರು ಅಧಿಕಾರಿಗಳಲ್ಲಿ ಈ ಮೂಲಕ ಎಚ್ಚರಿಸಿದ್ದಾರೆ.
ಅಭಿಮತ:
ದೊಡ್ಡ ಮತ್ತದ ಬಿಲ್ ಪಾವತಿಯ ಬಗ್ಗೆ ತಮಗೆ ಈವರೆಗೆ ಯಾವುದೇ ದೂರುಗಳು ಬಂದಿಲ್ಲ. ಆದರೆ ಪ್ರಸ್ತುತ ಕುಡಿಯುವ ಜಲ ವಿತರಣೆಯ ಬಿಲ್ ಪಾವತಿಯ ಲೆಕ್ಕಾಚಾರಗಳು ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆಯಡಿ ನಿರ್ವಹಿಸಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ತಂತ್ರಾಂಶ(ಸಾಪ್ಟ್‍ವೇರ್)ಕ್ಕೆ ಸಂಬಂಧಿಸಿದ ತಕರಾರು ಇಷ್ಟೊಂದು ಮೊತ್ತದ ಬಿಲ್ ಪಾವತಿಗೆ ಕಾರಣವಾಗಿರಬಲ್ಲದು. ಆದ್ದರಿಂದ ಸಮಸ್ಯೆಗೊಳಗಾದವರು ಕಾಸರಗೋಡಿನ ಜಲ ಪೂರೈಕಾ ಇಲಾಖೆಯ ಅಧಿಕೃತರಿಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯೊಂದಿಗೆ ದೂರು ದಾಖಲಿಸಬಹುದು. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಪದ್ಮನಾಭನ್
ಶುದ್ದಜಲ ವಿತರಣಾ ವಿಭಾಗದ ಜಿಲ್ಲಾ ಸಹಾಯಕ ಅಭಿಯಂತರ(ಹಣಕಾಸು ವಿಭಾಗ)


