ಮಧೂರು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಜರಗುವ ಕಾರ್ತಿಕ ದೀಪೆÇೀತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಅವರು ದೇವತಾ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಿದರು.
ಅ.28 ರಂದು ಬಲಿವಾಡು ಕೂಟದೊಂದಿಗೆ ಪ್ರಾರಂಭಗೊಂಡು ಒಂದು ತಿಂಗಳ ಪರ್ಯಂತ ರಾತ್ರಿ ಭಜನಾ ಸಂಕೀರ್ತನೆ ನಡೆದು ನ.27 ರಂದು ಮಹಾಬಲಿವಾಡು ಕೂಟದೊಂದಿಗೆ ಸಮಾಪ್ತಿಗೊಳ್ಳಲಿದೆ. ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳಿಂದ ಪ್ರತಿ ದಿನವೂ ರಾತ್ರಿ 7.30 ರಿಂದ ಭಜನಾ ಸಂಕೀರ್ತನೆ ನಡೆದು 8.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಒಂದು ತಿಂಗಳ ಕಾಲ ಪ್ರತಿದಿನವೂ 7 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ ಜರಗಲಿದೆ. ಆಮಂತ್ರಣ ಪತ್ರಿಕೆಗಳನ್ನು ಪ್ರತಿ ಮನೆಗಳಿಗೂ ತಲುಪಿಸುವ ಸಲುವಾಗಿ ಹಲವು ತಂಡಗಳನ್ನು ರಚಿಸಿ ವಿತರಿಸಲಾಯಿತು. ಎಲ್ಲಾ ದಿನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕ್ಷೇತ್ರ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಶೀನ ಶೆಟ್ಟಿ ಕಜೆ ವಿನಂತಿಸಿದ್ದಾರೆ.
ಭಜನಾ ತಂಡಗಳ ನಿರ್ವಹಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಶುಚೀಕರಣ ಇತ್ಯಾದಿ ಕಾರ್ಯಗಳಿಗೆ ಉಪ ಸಮಿತಿಗಳನ್ನು ರಚಿಸಲಾಯಿತು. ಶ್ರೀ ಕ್ಷೇತ್ರದ ಆಡಳಿತ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿಯ ಎಲ್ಲಾ ಸದಸ್ಯರು, ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತರು.


