ಕಾಸರಗೋಡು: ಕೇರಳ ರಾಜ್ಯ ವಾಣಿಜ್ಯ-ವ್ಯವಸಾಯ ಮಜ್ದೂರ್ ಫೆಡರೇಶನ್(ಬಿಎಂಎಸ್) ನಾಲ್ಕನೇ ರಾಜ್ಯ ಸಮ್ಮೇಳನ ಕುಂಬಳೆ ಸನಿಹದ ಅನಂತಪುರ ಠೇಂಗಡಿ ನಗರದಲ್ಲಿ ನವೆಂಬರ್ 24ರಂದು ಜರುಗಲಿದೆ. ಕೆರಳದಲ್ಲಿ ವಾಣಿಜ್ಯವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಒಟ್ಟುಗೂಡಿಸಿ, ಈ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಎಂಎಸ್ ಮೇಲ್ನೋಟದಲ್ಲಿ ಕೇರಳ ಪ್ರದೇಶ ವಾಣಿಜ್ಯ ಮಜ್ದೂರ್ ಸಂಘಟನೆ ಕಾರ್ಯಾಚರಿಸುತ್ತಿದೆ. ಈ ವಲಯದ ಕಾರ್ಮಿಕರು ರಾಜ್ಯದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ, ಅಗತ್ಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ತೀರ್ಮಾಣ ಕೈಗೊಳ್ಳುವುದಾಗಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ. ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರದಲ್ಲೇ ಅತಿ ದೊಡ್ಡ ಕಾರ್ಮಿಕ ಸಂಘಟನೆ ಎಂಬ ಹೆಗ್ಗಳಿಕೆ ಹೊಂದಿರುವ ಬಿಎಂಎಸ್ ಸಂಘಟನೆ ನೇತೃತ್ವದಲ್ಲಿ ವಾಣಿಜ್ಯ ವ್ಯವಸಾಯಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರನ್ನು ಸಂಘಟಿತರನ್ನಾಗಿಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮ್ಮೇಳನ ಶ್ರಮಿಸಲಿದೆ. 24ರಂದು ಬೆಳಗ್ಗೆ 10ಕ್ಕೆ ನಡೆಯುವ ಪ್ರತಿನಿಧಿ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಶಿವಾಜಿ ಸುದರ್ಶನ್ ಉದ್ಘಾಟಿಸುವರು. ಒಕ್ಕೂಟ ರಾಜ್ಯ ಸಮಿತಿ ಅಧ್ಯಕ್ಷ ಪಿ.ಶಶಿಧರನ್ ಅಧ್ಯಕ್ಷತೆ ವಹಿಸುವರು.ಬಿಎಂಎಸ್ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿಸಿ.ವಿ ರಆಜೇಶ್, ಕಾರ್ಯದರ್ಶಿ ವಿ.ವಿ ಬಾಲಕೃಷ್ಣನ್, ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲ ಪಿ.ಮುರಳೀಧರನ್, ಒಕ್ಕೂಟ ರಾಜ್ಯ ಸಮಿತಿ ಕಾರ್ಯರ್ಶಿ ಕೆ.ಜಿ ಸೋಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕನ್ವೀನರ್ ಪಿ.ದಿನೇಶ್, ನಗರಸಭಾ ಕಾರ್ಯದರ್ಶಿ ಬ್ರಿಜೇಶ್ ಉಪಸ್ಥಿತಿರಿದ್ದರು.

