ಕಾಸರಗೋಡು: ಕಾಸರಗೋಡು ಜಿಲ್ಲಾ ಜವಾಬ್ದಾರಿ ಪ್ರವಾಸೋದ್ಯಮ ಮಿಷನ್, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವತಿಯಿಂದ ಎಕ್ಸ್ ಪೀರಿಯನ್ಸ್ ಎತ್ನಿಕ್ ಕ್ಯೂಸಿನ್ ಯೋಜನೆ ಸಂಬಂಧ ಜಿಲ್ಲೆಯಲ್ಲಿ ನೋಂದಣಿ ನಡೆಸಿರುವವರಿಗೆ ತರಬೇತಿ ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಜಿಲ್ಲೆಯ ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿ 8 ಪ್ರದೆಶಗಳಲ್ಲಿ ಕಾಸರಗೋಡು ಕೆಫೆ, 7 ಬೀಚ್‍ಗಳಲ್ಲಿ ವಿಷಯಾಧರಿತ ಅಭಿವೃದ್ಧಿ ಯೋಜನೆ ಇತ್ಯಾದಿ ಜಾರಿಗೊಳಿಸಲಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೊಳ್ಳುವ ವೇಳೆ ಜಿಲ್ಲೆಯ ಯುವಜನತೆಗೆ ಉದ್ಯೋಗಾವಕಶಗಳೂ ಸೃಷ್ಟಿಯಾಗುತ್ತವೆ ಎಂದವರು ನುಡಿದರು. ಪ್ರವಾಸೋದ್ಯಮ ಇಲಾಖೆ ಡಿ.ಡಿ. ಬೇಬಿ ಷೀಜಾ ಅಧ್ಯಕ್ಷತೆ ವಹಿಸಿದ್ದರು. ಜವಾಬ್ದಾರಿ ಪ್ರವಾಸೋದ್ಯಮ ಮಿಷನ್ ಮಲಪ್ಪುರಂ ಜಿಲ್ಲಾ ಸಂಚಾಲಕ ಸಿಬಿನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಉದುಮಾದ ರಾಜ್ಯ ಆಹಾರ ಕ್ರಾಫ್ಟ್ ಇನ್ಸ್ ಸ್ಟಿಟ್ಯೂಟ್ ಶಿಕ್ಷಕ ಷಿಜು ತರಗತಿ ನಡೆಸಿದರು. ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ಉಪಸ್ಥಿತರಿದ್ದರು.
ಎಕ್ಸ್ ಪೀರಿಯನ್ಸ್ ಎತ್ನಿಕ್ ಕ್ಯೂಸಿನ್:
ಗ್ರಾಮೀಣ ಪ್ರವಾಸೋದ್ಯಮ ಸಬಲೀಕರಣ ಉದ್ದೇಶದಿಂದ ರಾಜ್ಯ ಜವಾಬ್ದಾರಿ ಪ್ರವಾಸೋದ್ಯಮ ಮಿಷನ್ ಜಾರಿಗೊಳಿಸುವ ಯೋಜನೆಯೇ ಎಕ್ಸ್ ಪೀರಿಯನ್ಸ್ ಎತ್ನಿಕ್ ಕ್ಯೂಸಿನ್. ವಿದೇಶಿ ಪ್ರವಾಸಿಗರನ್ನು ಮನೆಗೆ ಕರೆತಂದು ಅವರಿಗೆ ಪರಂಪರಾಗತ ಶೈಲಿಯಲ್ಲಿ ಊಟೋಪಚಾರ ನೀಡುವುದು ಇಲ್ಲಿನ ಪ್ರಧಾನ ಉದ್ದೇಶ. ಈ ಮೂಲಕ ರಾಜ್ಯಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಕೇರಳೀಯ ಶೈಲಿಯ ಆಹಾರವನ್ನು ಸಿದ್ಧಪಡಿಸುವ ಶೃಂಗವೊಂದನ್ನು ರಾಜ್ಯಾದ್ಯಂತ ಬೆಳೆಸುವುದು ಇಲ್ಲಿನ ಗುರಿಯಾಗಿದೆ. ಇಂಥಾ ಉದ್ದಿಮೆದಾರರ ಮನೆ ಇರುವ ಲೊಕೇಶನ್, ಫೆÇಟೋ, ದೂರವಾಣಿ ಸಂಖ್ಯೆ, ಸಿದ್ಧಪಡಿಸುವ ಆಹಾರ ವೈವಿಧ್ಯಗಳು ಇತ್ಯಾದಿ ಮಾಹಿತಿಗಳನ್ನು ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ಮೂಲಕ ವಿದೇಶಿ ಪ್ರವಾಸಿಗರಿಗೆ ಒದಗಿಸಲಾಗುವುದು. ಈ ಮೂಲಕ ರಾಜ್ಯದ ಅನೇಕ ಮಂದಿಗೆ, ಅದರಲ್ಲೂ ಗೃಹಿಣಿಯರಿಗೆ ಈ ಯೋಜನೆಯಿಂದ ಉತ್ತಮ ಆದಾಯ ಲಭ್ಯವಾಗುವ ಸಾಧ್ಯತೆಯಿದೆ.

