ಬದಿಯಡ್ಕ: ಡಾ.ವೈ.ಕೆ ಕೇಶವ ಭಟ್ಟರು ಅಹೋರಾತ್ರಿ ಸಮಾಜಕ್ಕೆ ಬೇಕಾಗಿ ದುಡಿದವರು.ಅಧಿಕಾರಕ್ಕೆ ಬೇಕಾಗಿ ಕೆಲಸ ಮಾಡಿದವರಲ್ಲ.ಅವರೊಬ್ಬ ನಿಸ್ವಾರ್ಥ ಸಮಾಜ ಸೇವಕರು ಎಂದು ನಿವೃತ್ತ ಅಧ್ಯಾಪಕ, ಸಾಮಾಜಿಕ ಧಾರ್ಮಿಕ ಮುಂದಾಳು ಬಾಬು ಮಾಸ್ತರ್ ಅಗಲ್ಪಾಡಿ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಶುಕ್ರವಾರ ಜರಗಿದ ಗ್ರಂಥಾಲಯದ ಸ್ಥಾಪಕ ಡಾ.ವೈ.ಕೆ ಕೇಶವ ಭಟ್ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣ ಭಾಷಣ ಮಾಡಿದರು.
ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯರಾಗಿ,ಉಪಾಧ್ಯಕ್ಷರಾಗಿ,ಅಧ್ಯಕ್ಷರಾಗಿ ಕೇಶವ ಭಟ್ಟರು ಮಾಡಿದ ಕಾರ್ಯಗಳನ್ನು ವಿವರಿಸಿದ ಅವರು ಅವರಿಗೆ ಅವರೇ ಸಮಾನರು. ಅವರು ಬಿಟ್ಟು ಹೋದ ನಿರ್ವಾತವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ಸಾಕ್ಷರತಾ ಯಜ್ಞದ ಸಂದರ್ಭದಲ್ಲಿ ಕೇಶವ ಭಟ್ಟರೊಂದಿಗೆ ಒಡನಾಡಿದ ದಿನಗಳನ್ನು ಸ್ಮರಿಸಿದರು.
ಗ್ರಂಥಾಲಯದ ಅಧ್ಯಕ್ಷ ಕೆ. ನರಸಿಂಹ ಭಟ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ಕೇಶವ ಭಟ್ಟರೊಂದಿಗಿನ ಒಡನಾಟದ ಕೆಲವು ಘಟನೆಗಳನ್ನು ನೆನಪಿಸಿ ತನ್ನ ಜೀವನಕ್ಕೆ ತಿರುವು ನೀಡಿದುವು ಎಂಬುದನ್ನು ಹೇಳಿದರು.
ಅನುಷಾನಾಥ್,ಪೂಜಾಶ್ರೀ,ಶ್ರೀಜಾ,ನಿಕ್ಷಿತ,ಆಯಿಷಾ,ದೀಪ್ತಿ,ಶ್ರೀನಿಕಾ, ಮಾಲತಿ ಏತಡ್ಕ,ಸುಮತಿ ಏತಡ್ಕ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಗಾಯನ ನಡೆಸಿದರು. ಈ ಸಂದರ್ಭ ಡಾ.ಕೇಶವ ಭಟ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ವೇಣುಗೋಪಾಲ್ ಕಳೆಯತ್ತೋಡಿ ವಂದಿಸಿದರು.


