HEALTH TIPS

ಮಂಗಳೂರಿನಲ್ಲಿ ಡಾ. ಪೆರ್ಲರ ಸಾಹಿತ್ಯಾವಲೋಕನ ಕಾರ್ಯಕ್ರಮ ಜ.11 ರಂದು

         ಮಂಗಳೂರು: ಮಂಗಳೂರು: ಹೊಸ ತಲೆಮಾರಿನ ಪ್ರಮುಖ ಕವಿ ಹಾಗೂ ಸಾಹಿತಿಗಳಾಗಿರುವ ಡಾ. ವಸಂತಕುಮಾರ ಪೆರ್ಲ ಅವರ ಸಾಹಿತ್ಯ ವ್ಯವಸಾಯದ ವಿವಿಧ ಆಯಾಮಗಳ ಕುರಿತು ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪದವಿಪೂರ್ವ ಕಾಲೇಜು ತನ್ನ ಕನ್ನಡ ಸಂಘದ ಆಶ್ರಯದಲ್ಲಿ ಒಂದು ದಿನ ಪೂರ್ತಿ ಪೆರ್ಲರ ಸಮಗ್ರ ಸಾಹಿತ್ಯಾವಲೋಕನ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದೆ.
         ಡಾ. ವಸಂತಕುಮಾರ ಪೆರ್ಲ ಅವರು ಕನ್ನಡ, ತುಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದು, ಕಾವ್ಯ ಕತೆ ಕಾದಂಬರಿ ವಿಮರ್ಶೆ ಸಂಪಾದನೆ ಸಂಶೋಧನೆ ವ್ಯಕ್ತಿಚಿತ್ರ ಚಾರಣಸಾಹಿತ್ಯ ಅಂಕಣಸಾಹಿತ್ಯ ಮುಂತಾಗಿ ಇದುವರೆಗೆ ಸುಮಾರು ನಲವತ್ತೈದರಷ್ಟು ಕೃತಿರಚನೆ ಮಾಡಿದ್ದಾರೆ. ಮಾಧ್ಯಮರಂಗದ ತಲಸ್ಪರ್ಶಿ ಜ್ಞಾನ ಹೊಂದಿದ್ದು, ರಂಗಭೂಮಿ, ಟಿ. ವಿ., ಸಿನಿಮಾ, ಸಂಘಟನೆ, ಸಮಾಜಸೇವೆ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಡಾ. ಪೆರ್ಲರ ಸಾಹಿತ್ಯವು ಕೊಂಕಣಿ ಮಲಯಾಳ ತಮಿಳು ತೆಲುಗು ಹಿಂದಿ ಪಂಜಾಬಿ ಇಂಗ್ಲಿಷ್ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ. ಆಕಾಶವಾಣಿಯ ಮೂಲಕ ಅವರ ಸೇವೆ ಸ್ಮರಣೀಯವಾಗಿದ್ದು, ಸಾವಿರಾರು ಮಂದಿ ಕವಿ ಸಾಹಿತಿ ಕಲಾವಿದರನ್ನು ಪೆÇ್ರೀತ್ಸಾಹಿಸಿ ಬೆಳೆಸಿದ ಶ್ರೇಯಸ್ಸು ಪೆರ್ಲರದಾಗಿದೆ.
        ಜ.11 ರಂದು ಶನಿವಾರ ಬೆಳಗ್ಗೆ 9.30 ಕ್ಕೆ ಹಂಪಿ ಕನ್ನಡ ವಿ. ವಿ. ಯ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆಗಿರುವ ಎಂ. ಎಸ್. ಮಹಾಬಲೇಶ್ವರ ಭಟ್ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸೂರಿಕುಮೇರಿ ಗೋವಿಂದ ಭಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಜರಗಲಿರುವ ಮೊದಲ ಗೋಷ್ಠಿಯಲ್ಲಿ ಡಾ. ಪೆರ್ಲರ ಕಾವ್ಯ ಸಾಹಿತ್ಯದ ಬಗ್ಗೆ ಕವಿ ಹಾಗೂ ಪತ್ರಕರ್ತ ರಾಧಾಕೃಷ್ಣ  ಕೆ. ಉಳಿಯತ್ತಡ್ಕ ಹಾಗೂ ಡಾ. ಪೆರ್ಲರ ಗದ್ಯ ಸಾಹಿತ್ಯದ ಕುರಿತು ಲೇಖಕಿ ಹಾಗೂ ಮೂಲ್ಕಿ ವಿಜಯಾ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕರಾದ ಡಾ. ಶೈಲಜಾ ಯೇತಡ್ಕ ಪ್ರಬಂಧ ಮಂಡಿಸುವರು ಅನಂತರ ಕಲಾವಿದೆ ರತ್ನಾವತಿ ಜೆ. ಬೈಕಾಡಿ ಪೆರ್ಲರ ಭಾವಗೀತೆಗಳನ್ನು ರಾಗ ಸಂಯೋಜಿಸಿ ಹಾಡಲಿರುವರು.
          ಅಪರಾಹ್ನ ಕವಿಗೋಷ್ಠಿ ಜರಗಲಿದ್ದು ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ಶಶಿಲೇಖಾ ಬಿ., ಡಾ. ಮೀನಾಕ್ಷಿ ರಾಮಚಂದ್ರ, ಎಂ. ಜಿ. ಹೆಗಡೆ ಮಂಗಳೂರು, ಡಾ. ಪಿ. ಬಿ. ಪ್ರಸನ್ನ, ಡಾ. ಜ್ಯೋತಿ ಚೇಳ್ಯಾರು, ರಘು ಇಡ್ಕಿದು ಮತ್ತು ಸುಧಾರಾಣಿ ಸ್ವರಚಿತ ಕವಿತೆಗಳನ್ನು ಮಂಡಿಸುವರು.
         ಅಪರಾಹ್ನದ ಎರಡನೇ ಗೋಷ್ಠಿಯಲ್ಲಿ ಮಾಧ್ಯಮ ವ್ಯಕ್ತಿಯಾಗಿ ಡಾ. ಪೆರ್ಲ ಎಂಬ ವಿಷಯದ ಬಗ್ಗೆ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕಿ ಎನ್. ಉಷಾಲತಾ ಹಾಗೂ ಸಂಘಟಕರಾಗಿ ಡಾ. ಪೆರ್ಲ ಎಂಬ ವಿಷಯದ ಬಗ್ಗೆ ಶ್ರೀ ರಾಮಕೃಷ್ಣ   ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿಶೋರ್ ಕುಮಾರ್ ರೈ ಶೇಣಿ ಪ್ರಬಂಧ ಮಂಡಿಸಲಿರುವರು.
         ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ. ಎಸ್. ಆರ್. ಅರುಣ್ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಮುಖ್ಯ ಅತಿಥಿಗಳಾಗಿರುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಪಿ. ಎಸ್. ಎಡಪಡಿತ್ತಾಯ ಅವರು ಅಧ್ಯಕ್ಷತೆ ವಹಿಸಲಿದ್ದು, ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಸಿ. ನಾಯ್ಕ್ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ಉಪಸ್ಥಿತಿ ಇರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries