ಉಪ್ಪಳ: ಭಾಷಾ ಅಲ್ಪಸಂಖ್ಯಾಕ ಅವಿಭಜಿತ ಕಾಸರಗೋಡು ತಾಲೂಕಿನಿಂದ ಪ್ರತ್ಯೇಕಿಸಲ್ಪಟ್ಟ ಮಂಜೇಶ್ವರ ತಾಲೂಕನ್ನು ಕನ್ನಡ ಭಾಷಾ ಅಲ್ಪಸಂಖ್ಯಾತ ತಾಲೂಕಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಜ.16 ರಂದು ಉಪ್ಪಳ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸತ್ಯಾಗ್ರಹ ನಡೆಯಲಿದೆ.
ಸಂಬಂಧಪಟ್ಟ ಇಲಾಖೆಗಳಿಂದ ಸಕಾರಾತ್ಮಕ ವರದಿ ಕಳುಹಿಸಿ ತಿಂಗಳು ಎರಡು ಕಳೆದರೂ ಅಧಿಕೃತವಾಗಿ ಘೋಷಣೆ ಮಾಡಲು ಹಿಂದೇಟು ಹಾಕುವುದರ ಗುಟ್ಟು ಏನೆಂದು ಅರ್ಥವಾಗುತ್ತಿಲ್ಲ. ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ದೊರಕಿದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕನ್ನಡಿಗರಿಗೆ ವಿಪುಲವಾದ ಉದ್ಯೋಗ ಅವಕಾಶವಿದೆ.
ಈ ಕುರಿತು ಒತ್ತಾಯ ಹೇರಲು ಜ.16 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ರ ವರೆಗೆ ಉಪ್ಪಳದಲ್ಲಿ ಕಾ ರ್ಯಾಚರಿಸುವ ತಾಲೂಕು ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಕನ್ನಡ ಭಾಷಾಭಿಮಾನಿಗಳು, ಕನ್ನಡ ಉದ್ಯೋಗಾಕಾಂಕ್ಷಿಗಳು, ಪರೀಕ್ಷಾರ್ಥಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



