ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊ0ದಿಗೆ ಇಮದು ಚಾಲನೆ
ಕುಂಬಳೆ: ಕುಂಬಳೆ ಸೀಮೆಯ ಪ್ರಮುಖ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಇಂದು(ಮಂಗಳವಾರ) ಧ್ವಜಾರೋಹಣ ನಡೆಯುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ ಆರಂಭಗೊಳ್ಳಲಿದೆ. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನಡೆಯಲಿದ್ದು, ಬೆಳಿಗ್ಗೆ 8ಕ್ಕೆ ಪಯ್ಯನ್ನೂರು ಕೆ.ವಿ.ರಾಜನ್ ಮಾರಾರ್ ಅವರಿಂದ ಅಷ್ಟಪದಿ ಸೋಪಾನ ಸಂಗೀತ,9.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು ಶ್ರೀಗೋಪಾಲಕೃಷ್ಣ ಸೇವಾ ಸಮಿತಿ ಕೃಷ್ಣನಗರ ಹಾಗೂ ಸಂಪಿಗೆ ಕಟ್ಟೆ ಶ್ರೀವನದುರ್ಗ ವನಶಾಸ್ತಾರ ಕ್ಷೇತ್ರ ಸಮಿತಿ ಕುಂಟಂಗೇರಡ್ಕ ಅವರಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಶ್ರೀಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಮಲ್ ರಾಜ್ ಪಿ.ಎಸ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ರಾತ್ರಿ 8.30ರಿಂದ ಉತ್ಸವ ಬಲಿ, ರಂಗಪೂಜೆ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಉತ್ಸವ ಬಲಿ ನಡೆಯುವುದು. ಬುಧವಾರ ಸಂಜೆ 7 ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಲ ಪ್ರತಿಭೆ ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11.30 ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. 16ರಂದು ರಾತ್ರಿ 9ಕ್ಕೆ ನಡು ದೀಪೋತ್ಸವ, ದರ್ಶನ ಬಲಿ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ರಿಂದ ಬೆಳಗಾವಿಯ ರಜತ ಕುಲಕರ್ಣಿ ಬಳಗದವರಿಂದ ಹಿಂದೂಸ್ತಾನಿ ಸಂತವಾಣಿ ಹಾಗೂ ದಾಸವಾಣಿ ನಡೆಯಲಿದೆ. 17ರಂದು ರಾತ್ರಿ 9.45ಕ್ಕೆ ಬೆಡಿಕಟ್ಟೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯುವುದು. 18ರಂದು ಬೆಳಗ್ಗೆ 11ಕ್ಕೆ ತುಲಾಭಾರ ಸೇವೆ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 9ಕ್ಕೆ ಉತ್ಸವ, ಶ್ರೀದೇವರ ಅವಭೃತ ಸ್ನಾನ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು. ರಾತ್ರಿ 8.30 ರಿಂದ ಯಕ್ಷದ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ವತಿಯಿಂದ ಯಕ್ಷಗಾನ ವೈಭವ ನಡೆಯಲಿದೆ. ಬಳಿಕ ರಾತ್ರಿ 10 ರಿಂದ ಯಕ್ಷಮಿತ್ರರು ಮುಜುಂಗಾವು ಇವರಿಂದ ಮಹಾಶೂರ ಭೌಮಾಸುರ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. 19 ರಂದು ಶ್ರೀದೇವರಿಗೆ ಪಂಚಾಮೃತಾಭಿಷೇಕ, ಎಳನೀರು ಅಭಿಷೇಕ, ಮಹಾಪೂಜೆ,ಶ್ರೀಬಲಿ, ಅನ್ನದಾನ, ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.



