ಕುಂಬಳೆ: ಶ್ರೀಕ್ಷೇತ್ರ ಅನಂತಪುರದಲ್ಲಿ ಜ.18ರಂದು ನಡೆಯುವ 2701ನೇ ಸ್ವ ಸಹಾಯ ಸಂಘದ ಉದ್ಘಾಟನೆ ಮತ್ತು ನವಜೀವನ ಸದಸ್ಯರ ಬೃಹತ್ ಸಮಾವೇಶದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವನ್ನಾಗಿ ಮಾಡುವ ಉದ್ದೇಶದಿಂದ ಅತ್ಯಂತ ಮಹತ್ವದ ಕೆಲವು ಸಲಹೆ ಸೂಚನೆಗಳನ್ನು ಈ ಬಗ್ಗೆ ಸೇರಿದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು. ಯಾವುದೇ ಕಾರಣಕ್ಕೂ ಪ್ರಚಾರದ ಬ್ಯಾನರ್, ಸ್ವಾಗತ ಕಮಾನು, ವೇದಿಕೆ ಮತ್ತಿತರ ಅಲಂಕಾರಕ್ಕಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ. ಪ್ಲಾಸ್ಟಿಕ್‍ನಿಂದ ತಯಾರಿಸಿದ ಹೂಗಳ ಬಳಕೆ, ತೋರಣಗಳನ್ನೂ ಬಳಸದಂತೆ ಸೂಚಿಸಿದ್ದು ಸದುದ್ದೇಶದಿಂದ ಮಾಡುವ ಕಾರ್ಯದಲ್ಲಿ ಯಾವುದೇ ಅನಗತ್ಯ. ನಿಷೇಧಿತ ವಸ್ತುಗಳ ಬಳಕೆಯನ್ನು ಸಂಪೂರ್ಣ ತಿರಸ್ಕರಿಸುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ. ಎಂ. ಸೂಚನೆ ನೀಡಿದರು.
ಪ್ರಕೃತಿಯ ಮೇಲೆ ಪ್ಲಾಸ್ಟಿಕ್ ಬಳಕೆಯು ಉಂಟುಮಾಡುವ ಪರಿಣಾಮವನ್ನು ಅರಿತು ಕಾರ್ಯನಿರ್ವಹಿಸುವ ಮೂಲಕ ಮಾದರಿಯಾಗುವಂತೆ ಸೂಚಿಸಿದರು. ದೇವಸ್ಥಾನದ ವಠಾರದಲ್ಲಿ ನಡೆದ ಆವಲೋಕನಾ ಸಭೆಯಲ್ಲಿ ಜನ ಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್, ಮಾಜಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ದೇವಸ್ಥಾನದ ಆಡಳಿತ ಮೊಕ್ತೇಸರ ಮಾಲಿಂಗೇಶ್ವರ ಭಟ್, ದೇವಸ್ಥಾನದ ಟ್ರಸ್ಟಿಗಳಾದ ಉದಯ ಕುಮಾರ್, ಜಯಪ್ರಕಾಶ್ ಶೆಟ್ಟಿ, ಧ.ಗ್ರಾ. ಯೋಜನೆಯ ಬಿ.ಪಿ. ಶೇಣಿ, ಜಯಾನಂದ ಕುಮಾರ್ ಹೊಸದುರ್ಗ, ಹರೀಶ್ ಶೆಟ್ಟಿ ಕಡಂಬಾರು, ಬಾಲಕೃಷ್ಣ ವಾಮನ ಆಚಾರ್ಯ, ಗಂಗಾಧರ, ಸಚಿನ್ ಕುಮಾರ್ ಮತ್ತು ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.




