ಕಾಸರಗೋಡು: ಕಳೆದ ಹತ್ತು ವರ್ಷದಲ್ಲಿ ರಾಜ್ಯದಲ್ಲಿ 4142 ವಿದ್ಯುತ್ ಶಾಕ್ ತಗಲಿದ ಘಟನೆ ನಡೆದಿದ್ದು, ಈ ಪೈಕಿ 2439 ಮಂದಿ ಬಲಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪ್ರತೀ ವರ್ಷ ಸರಾಸರಿ ತಲಾ 200 ಮಂದಿ ರಾಜ್ಯದಲ್ಲಿ ವಿದ್ಯುತ್ ಶಾಕ್‍ನಲ್ಲಿ ಸಾವಿಗೀಡಾಗಿದ್ದಾರೆ.
2018-19 ರಲ್ಲಿ ಮಾತ್ರ ರಾಜ್ಯದಲ್ಲಿ ವಿದ್ಯುತ್ ಶಾಕ್‍ನಿಂದ 249 ಮಂದಿ ಸಾವಿಗೀಡಾಗಿದ್ದಾರೆ. ವಿದ್ಯುನ್ಮಂಡಳಿಯ ಸಿಬ್ಬಂದಿಗಳು ಕೆಲಸದಲ್ಲಿ ನಿರತರಾದ ವೇಳೆ ಶಾಕ್ ತಗಲಿ ಉಂಟಾದ ಸಾವು, ಮನೆಗಳಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸುವ ವೇಳೆ ಉಂಟಾಗಿರುವ ಶಾಕ್, ವಿದ್ಯುತ್ ತಂತಿ ಬೇಲಿ, ಕಬ್ಬಿಣ ಇತ್ಯಾದಿ ಲೋಹಗಳನ್ನು ಅಜಾಗ್ರತೆಯಿಂದ ಬಳಸುವ ವೇಳೆ ಅಕಸ್ಮಾತ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಉಂಟಾದ ಸಾವು ಇತ್ಯಾದಿಗಳು ಈ ಯಾದಿಯಲ್ಲಿ ಒಳಗೊಂಡಿದೆ. ಇದರ ಹೊರತಾಗಿ ವಿದ್ಯುತ್ ಶಾಕ್ ತಗಲಿ ಕಳೆದ ಹತ್ತು ವರ್ಷದಲ್ಲಿ ರಾಜ್ಯದಲ್ಲಿ ವಿವಿಧೆಡೆಗಳಲ್ಲಾಗಿ 553 ಪ್ರಾಣಿಗಳು ಸಾವನ್ನಪ್ಪಿದೆ. ಇದರಲ್ಲಿ ಕಾಡಾನೆಗಳು, ಇತರ ಜೀವಿಗಳಾದ ದನ, ಆಡು ಇತ್ಯಾದಿಗಳೂ ಒಳಗೊಂಡಿದೆ.




