ತಿರುವನಂತಪುರ: ರಾಜ್ಯದ ಎಲ್ಲಾ ಜೈಲುಗಳಲ್ಲೂ ಕೇಟರಿಂಗ್ ಘಟಕ ಆರಂಭಿಸಲು ರಾಜ್ಯ ಬಂಧೀಖಾನೆ ಇಲಾಖೆ ತೀರ್ಮಾನಿಸಿದೆ.
ಪ್ರಸ್ತುತ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಾತ್ರವೇ ಕೇಟರಿಂಗ್ ಘಟಕಗಳಿವೆ. ಇಲ್ಲಿ ಆಹಾರ ಪದಾರ್ಥ ಉತ್ಪಾದನೆ ಹೆಚ್ಚಿಸುವುದರ ಜತೆಗೆ ಇತರ ಜಿಲ್ಲೆಗಳಲ್ಲೂ ಇಂತಹ ಘಟಕ ಆರಂಭಿಸುವುದು ಇಲಾಖೆ ಹಾಕಿಕೊಂಡಿರುವ ಪ್ರಮುಖ ಯೋಜನೆಯಾಗಿದೆ. ರಾಜ್ಯದ ಹಲವು ಕಾರಾಗೃಹಗಳಲ್ಲಿ ಖೈದಿಗಳನ್ನು ಬಳಸಿ ಚಪಾತಿ, ಕೋಳಿ ಪದಾರ್ಥ, ಬಿರಿಯಾಣಿ, ಸಿಹಿ ತಿಂಡಿ, ಬೇಕರಿ ಸಾಮಾಗ್ರಿಗಳು ಇತ್ಯಾದಿಗಳನ್ನು ತಯಾರಿಸಿ ಪ್ಯಾಕೆಟ್‍ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಂಧೀಖಾನೆ ಇಲಾಖೆಗೆ ಭಾರೀ ಲಾಭವೂ ಉಂಟಾಗುತ್ತಿದೆ. ಈ ಲಾಭಾಂಶದ ಒಂದು ಪಾಲು ಸರ್ಕಾರದ ಖಜಾನೆಗೆ ಸೇರುತ್ತಿದೆ. ಇದುವೇ ಇಂತಹ ಕೇಟರಿಂಗ್ ಘಟಕಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಬಂಧೀಖಾನೆ ಇಲಾಖೆಗೆ ಪ್ರಚೋದನೆ ನೀಡಲು ಪ್ರಮುಖ ಕಾರಣವಾಗಿದೆ. ಜೈಲುಗಳಲ್ಲಿ ಉತ್ಪಾದಿಸುವ ವಿವಿಧ ರೀತಿಯ ಆಹಾರ ಪದಾರ್ಥಗಳಿಗೆ ಹೊರಗಡೆ ಭಾರೀ ಬೇಡಿಕೆಯಿದೆ.
ಇದೇ ಸಂದರ್ಭದಲ್ಲಿ ಜೈಲುಗಳಲ್ಲಿ ಈಗಿರುವ ಸೌಕರ್ಯಗಳಿಗೆ ಹೊಂದಿಕೊಂಡೇ ಅಲ್ಲಿ ಯಾವ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಬಹುದೆಂದು ನಿರ್ಧರಿಸಿ ಬಳಿಕ ಅದನ್ನು ಜಾರಿಗೊಳಿಸಲಾಗುವುದೆಂದು ರಾಜ್ಯ ಬಂಧೀಖಾನೆ ಡಿಜಿಪಿ ತಿಳಿಸಿದ್ದಾರೆ. ಕೇಟರಿಂಗ್ ಘಟಕ ಆರಂಭಿಸುವಂತೆ ಡಿಜಿಪಿ ರಾಜ್ಯದ ಎಲ್ಲಾ ಜೈಲು ಸೂಪರಿಂಟೆಂಡೆಂಟ್‍ರಿಗೆ ಸುತ್ತೋಲೆಯನ್ನು ಜಾರಿಗೊಳಿಸಿದ್ದಾರೆ. ಘಟಕ ಸ್ಥಾಪಿಸಲು ಜೈಲುಗಳಲ್ಲಿ ಇರುವ ಸೌಕರ್ಯಗಳ ಬಗ್ಗೆ ಮೊದಲು ವರದಿ ಸಲ್ಲಿಸುವಂತೆಯೂ ಜೈಲು ಅಧಿಕಾರಿಗಳಿಗೆ ಡಿಜಿಪಿ ನಿರ್ದೇಶ ನೀಡಿದ್ದಾರೆ.





