ಕಾಸರಗೋಡು: ಓರ್ವ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ಜಮೀನು ಹೊಂದಿದ್ದಾನೆ ಎಂಬುದನ್ನು ಗುರುತಿಸಲು ಲ್ಯಾಂಡ್ ಕಾರ್ಡ್ (ಜಮೀನು ಚೀಟಿ) ಸಂಪ್ರದಾಯ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಯೋಜನೆಯಂತೆ ಸ್ವಂತವಾಗಿ ಜಮೀನು ಹೊಂದಿದವರಿಗೆ ಲ್ಯಾಂಡ್ ಕಾರ್ಡ್ ನೀಡಲಾಗುವುದು. ರಾಜ್ಯದಲ್ಲಿ ಓರ್ವ ವ್ಯಕ್ತಿ ಸ್ವಂತವಾಗಿ ಎಲ್ಲೆಲ್ಲಾ ಜಮೀನು ಹೊಂದಿದ್ದಾನೆ ಎಂಬುದನ್ನು ಈ ಕಾರ್ಡ್‍ನಲ್ಲಿ ನಮೂದಿಸಲಾಗುವುದು. ಇಂತಹ ಸಂಪ್ರದಾಯ ಈಗ ಆಂಧ್ರ ಪ್ರದೇಶದಲ್ಲಿ ಮಾತ್ರವೇ ಪರೀಕ್ಷಾರ್ಥ ಜಾರಿಗೊಳಿಸಲಾಗಿದೆ.
ಭೂಮಿ ಹಸ್ತಾಂತರಕ್ಕೆ ಹೊಂದಿಕೊಂಡು ಲ್ಯಾಂಡ್ ಕಾರ್ಡ್‍ನಲ್ಲೂ ಅಗತ್ಯದ ಬದಲಾವಣೆ ತರಲಾಗುವುದು. ಇದಕ್ಕೆ ಪೂರ್ವಭಾವಿ ಸಿದ್ಧತೆ ಎಂಬಂತೆ ಸ್ವಂತವಾಗಿ ಭೂಮಿ ಹೊಂದಿದವರ ದಾಖಲುಪತ್ರಗಳೊಂದಿಗೆ ಅವರ ಆಧಾರ್ ಕಾರ್ಡ್‍ಗಳನ್ನು ಜೋಡಣೆ ಯತ್ನಕ್ಕೂ ಚಾಲನೆ ನೀಡಲಾಗಿದೆ. ಮಾತ್ರವಲ್ಲ ಭೂಮಿ ಮಾರಾಟಕ್ಕೆ ಆಧಾರ್ ಕಾರ್ಡ್‍ನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಹೊಂದಿಕೊಂಡು ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ತರುವ ವಿಷಯವೂ ಸರ್ಕಾರದ ಪರಿಗಣನೆಯಲ್ಲಿದೆ. ಗುರುತು ಹಚ್ಚಲು ಆಧಾರ್ ಕಾರ್ಡ್ ಬಳಸಬಹುದಾಗಿದ್ದರೂ, ಸೇವೆಗಳಿಗೆ ಅದನ್ನು ಕಡ್ಡಾಯಗೊಳಿಸಬಾರದೆಂದು ಸುಪ್ರೀಂಕೋರ್ಟ್‍ನ ನಿರ್ದೇಶವೂ ಇದೆ.
ಭೂ ನೋಂದಣೆ ಜೊತೆ ಆಧಾರ್ ಜೋಡಣೆ ನಡೆಸಿದ್ದಲ್ಲಿ ಭೂಮಿ ಅವ್ಯವಹಾರಕವನ್ನು ತಡೆಯಲು ಸಾಧ್ಯವಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.




