HEALTH TIPS

. ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-29-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

💐 ಸ್ವಚ್ಛ ಭಾಷೆ ಕಲಿಕೆಯ ಸಹಪಾಠಿಗಳೆಲ್ಲರಿಗೂ ಈ ಅಧಿಕ ವರ್ಷ ೨೦೨೦ ಒಳ್ಳೆಯದನ್ನು ತರಲಿ ಎಂದು ಶುಭ ಹಾರೈಕೆ.🙏

                              ಮೂರು ಟಿಪ್ಪಣಿಗಳು ಇಲ್ಲಿವೆ. 

೧. "ಕೃಷ್ಣ ಕಿಂಕರನಿಗೆ ಸಾವಿರದ ನಮನ"

ಮೊನ್ನೆ ೩೦ಡಿಸೆಂಬರ್೨೦೧೯ರ ವಿಜಯಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಹೀಗೊಂದು ಸುಂದರ, ಅರ್ಥಪೂರ್ಣ ತಲೆಬರಹ ಪ್ರಕಟವಾಗಿತ್ತು. ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಕೃಷ್ಣೈಕ್ಯರಾದ ಮೇಲೆ ಸಹಸ್ರಾರು ಜನರು ಅವರಿಗೆ ಅಂತಿಮ ನಮನ ಸಲ್ಲಿಸಿದ ಸಚಿತ್ರ ಸುದ್ದಿಗೆ ಪತ್ರಿಕೆಯು ಕೊಟ್ಟಿದ್ದ ತಲೆಬರಹವದು. ಐದು ನಕ್ಷತ್ರಗಳನ್ನು ಕೊಡಬಹುದು ಈ ತಲೆಬರಹಕ್ಕೆ, ಅಷ್ಟೂ ಒಳ್ಳೆಯದು ನನ್ನ ಪ್ರಕಾರ. ಕೃಷ್ಣ ಕಿಂಕರ ಎಂಬ ಪದಗಳಲ್ಲಿ ಅನುಪ್ರಾಸ (alliteration); ‘ಸಾವಿರದ’ ಎಂಬ ಪದವನ್ನು ಬಳಸಿದ್ದರಿಂದ ಸಹಸ್ರಾರು ಎಂಬ ಅರ್ಥವೂ ಬಂದಂತಾಯ್ತು, ಆತ್ಮಕ್ಕೆ ಸಾವು ಇರದ = ಸಾವಿರದ, ಅಮರ ಎಂದು ಕೂಡ ಅರ್ಥೈಸಿದಂತಾಯ್ತು. ಒಟ್ಟಿನಲ್ಲಿ ಅತ್ಯುತ್ತಮ ಕ್ರಿಯೇಟಿವ್ ಹೆಡ್‌ಲೈನ್.

ವಿಜಯಕರ್ನಾಟಕ ಪತ್ರಿಕೆಯ ಓದುಗರಾದ ಪುತ್ತೂರಿನ ಮನೋರಮಾ ಜಿ ಭಟ್ ಅವರಿಗೆ ಇದರಲ್ಲಿ ‘ಕಿಂಕರ’ ಪದಬಳಕೆ ಅಷ್ಟು ಸೂಕ್ತ/ಸಮಂಜಸ ಅಲ್ಲವೇನೋ ಎಂದು ಅನುಮಾನ ಬಂತಂತೆ. “ಇದು ಸರಿಯೇ? ಯಮಕಿಂಕರರು ಎಂದು ಕೇಳಿ/ಓದಿ ಗೊತ್ತು. ರಾಕ್ಷಸರ ಸೇವಕರನ್ನು ಹಾಗೆ ಹೇಳ್ತಾರೆ ಅಂದ್ಕೊಂಡಿದ್ದೆ. ದೇವರ ಸೇವಕರನ್ನು ಭಕ್ತ ಅನ್ನೋದಲ್ವಾ?" ಎಂದು ಅವರು ಒಂದು ಜಿಜ್ಞಾಸೆ ವ್ಯಕ್ತಪಡಿಸಿದ್ದಾರೆ.

ಜಿಜ್ಞಾಸೆಗೆ ಉತ್ತರ: ಕಿಂಕರ ಎಂಬ ಪದವನ್ನು ಯಮಕಿಂಕರ ಎಂಬ ಸಂದರ್ಭದಲ್ಲಿ ಹೆಚ್ಚಾಗಿ ಬಳಸುವುದು ಹೌದು. ಆದ್ದರಿಂದಲೇ ಆ ಪದವನ್ನು ಕೇಳಿದ/ಓದಿದ ಕೂಡಲೇ ಕೆಲವರಿಗೆ ಮನಸ್ಸಿನಲ್ಲಿ ಒಂದು ಕರಾಳ/ಭಯಾನಕ ಚಿತ್ರಣ- ಪಾಶಗಳನ್ನು ಹಿಡಿದುಕೊಂಡು ಪ್ರಾಣ ಒಯ್ಯಲು ಬಂದಿರುವ ಯಮದೂತರು- ಮೂಡುವ ಸಾಧ್ಯತೆಯಿರುವುದೂ ಹೌದು. ಆದರೆ ಕಿಂಕರ ಎಂಬ ಶುದ್ಧ ಸಂಸ್ಕೃತ ಪದದ ನಿಜ ಅರ್ಥ ಆ ರೀತಿ ಕರಾಳವೇನಲ್ಲ. ಕಿಂಕರ ಅಂದರೆ ಸೇವಕ ಅಥವಾ ಆಳು ಎಂದಷ್ಟೇ ಅರ್ಥ. ಸೇವಾಭಾವದಿಂದ ಕೆಲಸ ಮಾಡುವವನು. ಕಿಂ ( = ಏನನ್ನು) ಹೇಳಿದರೂ ಕರ ( = ಮಾಡುವವನು) ಕಿಂಕರ ಎಂದು ಈ ಪದವನ್ನು ವ್ಯಾಖ್ಯಾನಿಸಬಹುದು.

ಕನಕದಾಸರು ರಚಿಸಿದ “ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು..." ಕೀರ್ತನೆಯಲ್ಲಿ ಬರುತ್ತದೆ: “ಪಂಕಜಾಕ್ಷ ನೀನು ಎನ್ನ। ಮಂಕುಬುದ್ಧಿಯನ್ನು ಬಿಡಿಸಿ। ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ..." ಅಂದರೆ, “ನನ್ನನ್ನು ನಿನ್ನ ಸೇವಕನನ್ನಾಗಿ ಮಾಡಿಕೋ" ಎಂದು ದೇವರಲ್ಲಿ ಬೇಡುತ್ತಿರುವುದು. 

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯಲ್ಲಿ ಸಭಾಪರ್ವದ ೧ನೆಯ ಸಂಧಿಯ ೯೪ನೆಯ ಪದ್ಯದಲ್ಲಿ, ದೇವತೆಗಳೆಲ್ಲರೂ ಬ್ರಹ್ಮನ ಕಿಂಕರರು (ಸೇವಕರು) ಎಂಬ ವರ್ಣನೆಯಿದೆ: 

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು|
ಘನ ಚತುರ್ದಶವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿಯಾವುದೈ ನೃಪತಿ||

(ಬ್ರಹ್ಮನ ಆಸ್ಥಾನದ ಹಿರಿಮೆ ಎಂತಹುದೆಂದು ನಾರದ ಮಹರ್ಷಿ ವಿವರಿಸುತ್ತಾರೆ: “ಮುನಿಗಳೇ ಬ್ರಹ್ಮನ ಊಳಿಗದ ಹುಡುಗರು; ಮಂತ್ರಾಭಿಮಾನಿ ದೇವತೆಗಳು ಓಲೆಕಾತಿಯರು; ದೇವತೆಗಳೇ ಆತನ ಸೇವಕರು; ಸೂರ್ಯ ಮೊದಲಾದ ಆಕಾಶಕಾಯಗಳು ಅವನ ಸಹಚರರು; ಚತುರ್ದಶ ವಿದ್ಯೆಗಳು ಬ್ರಹ್ಮನ ವಂದಿಮಾಗಧರು. ಇವರೆಲ್ಲರೂ ಬ್ರಹ್ಮನ ಆಸ್ಥಾನದಲ್ಲಿರುವವರು. ಇದು ಬ್ರಹ್ಮನ ಹಿರಿಮೆ.")
===
೨. ಲೈನ್-ಬ್ರೇಕಿಂಗ್ ನ್ಯೂಸ್!

ಉದ್ದದ ವಾಕ್ಯವನ್ನು ಕಿರಿದಾದ ಜಾಗದಲ್ಲಿ ಬರೆಯುವಾಗ ಪದಗಳ ನಡುವೆ ಲೈನ್-ಬ್ರೇಕ್ ಕೊಡಬೇಕಾಗುತ್ತದೆ. ಆಗ ಉಂಟಾಗುವ ಒಂದೊಂದು ಸಾಲನ್ನು ಸ್ವತಂತ್ರವಾಗಿ ಓದಿದರೆ ಭಲೇ ಮಜಾ ಇರುತ್ತದೆ. ಉದಾಹರಣೆಗೆ "ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ" ಎಂಬ ವಾಕ್ಯವನ್ನು ಕಿರಿದಾದ ಜಾಗದಲ್ಲಿ (ಫಲಕದಲ್ಲಿ ಅಥವಾ ಪತ್ರಿಕೆಯ ಸುದ್ದಿಶೀರ್ಷಿಕೆಯಲ್ಲಿ) ಹೀಗೆ ಎರಡು ಸಾಲುಗಳಲ್ಲಿ ಬರೆದರೆ ಏನಾಗುತ್ತದೆ?

ಮದ್ಯಪಾನ ಮಾಡಿ
ವಾಹನ ಚಲಾಯಿಸಬೇಡಿ.

ಹಾಗೆಯೇ, ಚಿಕ್ಕಪುಟ್ಟ ರೆಸ್ಟೊರೆಂಟ್‌ಗಳಲ್ಲಿ, ದರ್ಶಿನಿಗಳಲ್ಲಿ ಬರೆದಿರುವ "ಗ್ಲಾಸು ಪ್ಲೇಟುಗಳಲ್ಲಿ ಕೈ ತೊಳೆಯಬೇಡಿ" - ಇದು:

ಗ್ಲಾಸು ಪ್ಲೇಟುಗಳಲ್ಲಿ
ಕೈ ತೊಳೆಯಬೇಡಿ.

ಇಂಥದೊಂದು ಸ್ವಾರಸ್ಯ ಕೆಲ ವರ್ಷಗಳ ಹಿಂದೊಮ್ಮೆ ಉದಯವಾಣಿ ಪತ್ರಿಕೆಯ ಜನವರಿ ೧ರ ಸಂಚಿಕೆಯಲ್ಲಿ ಕಂಡುಬಂದಿತ್ತು, ಈ ಕೆಳಗಿನ ಪ್ರಕಟಣೆಯಲ್ಲಿ.

ಇಂದಿನ ಸಂಚಿಕೆ ಜೊತೆ
ವರ್ಣರಂಜಿತ ಗೋಡೆ
ಕ್ಯಾಲೆಂಡರ್ ಇದೆ.

ಮೊನ್ನೆ ೨೫ ಡಿಸೆಂಬರ್ ೨೦೧೯ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಇಂಥದೇ ಒಂದು ಲೈನ್-ಬ್ರೇಕಿಂಗ್ ನ್ಯೂಸ್ (ಹೆಡ್‌ಲೈನ್) ಬಂದಿತ್ತು [ಗಮನಿಸಿ ಕಳುಹಿಸಿದವರು: ಮೋಹನ್ ಎಚ್‌ ಎಂ]. ಉಡುಪಿ ಜಿಲ್ಲೆಯ ಚಿಣ್ಣರ ಸಂತರ್ಪಣೆ ಶಾಲೆಗಳ ವಿದ್ಯಾರ್ಥಿಗಳ ಚಿಣ್ಣರ ಮಾಸೋತ್ಸವ ೨೦೧೯ ಅಂಗವಾಗಿ ಬಹುಮಾನ ವಿತರಣೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯುವ ಬಗೆಗಿನ ಸುದ್ದಿ ಅದು. ಮೂರು ಸಾಲುಗಳಲ್ಲಿ ತಲೆಬರಹ, ಹೀಗೆ:

ಚಿಣ್ಣರ ಮಾಸೋತ್ಸವ
ಬಹುಮಾನ ಸಿಎಂ
ವಿತರಣೆ ಇಂದು

ಅಂದರೆ, ಮುಖ್ಯಮಂತ್ರಿ ಯಡಿಯೂರಪ್ಪನವರೇ ಬಹುಮಾನ, ಮತ್ತು ಆ ಬಹುಮಾನದ ವಿತರಣೆ ಆ ದಿನ! ಯಾರಿಗೆ ಸಿಕ್ಕಿತೋ ಆ ಬಹುಮಾನ! ಮತ್ತು, ಅದನ್ನು ಏನು ಮಾಡಿದರೋ! 

===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು

ಅ) ಹೃಷ್ಟ-ಪುಷ್ಟ ಸರಿ. ಹೃಷ್ಟ ಎಂದರೆ ಸಂತೋಷಗೊಂಡಿರುವ, ಪ್ರೀತನಾದ ಎಂದು ಅರ್ಥ. ಪುಷ್ಟ ಅಂದರೆ ಚೆನ್ನಾಗಿ ಬೆಳೆದಿರುವ, ಬಲಶಾಲಿಯಾದ. ಹೃಷ್ಟ-ಪುಷ್ಟ ಎಂದರೆ ಎಲ್ಲ ರೀತಿಯಲ್ಲೂ ಗಟ್ಟಿಮುಟ್ಟಾದ, ಪೊಗದಸ್ತಾದ ಎಂದು ಅರ್ಥ. ಇದನ್ನು ತುಂಬ ಹಿಂದಿನ ಕಾಲದಿಂದಲೂ ‘ದಷ್ಟಪುಷ್ಟ’ ಎಂದು ತಪ್ಪಾಗಿ ಬಳಸುವುದು ರೂಢಿಯಲ್ಲಿದೆ. ‘ದಷ್ಟ’ ಎಂಬ ಪದಕ್ಕೆ ಸಂಸ್ಕೃತದಲ್ಲಿ ‘ಕಚ್ಚಲ್ಪಟ್ಟ’ ಅಥವಾ ಕಡಿತ, ಕಚ್ಚು ಗಾಯ ಎಂದು ಅರ್ಥ. ಅಂಥದ್ದು ಈಗ ದಷ್ಟಪುಷ್ಟ ಎಂಬ ಪದದ ಅರ್ಥವನ್ನು ಅದುಹೇಗೆ ಕೊಡುತ್ತದೋ! 

ಆ) ಸ್ಮಾರ್ತ ಸರಿ. ಸ್ಮೃತಿಗಳಲ್ಲಿ ಉಕ್ತವಾದ, ಸ್ಮೃತ್ಯುಕ್ತವಾದ ಕರ್ಮಗಳನ್ನು ಆಚರಿಸುವವನು ಎಂದು ಅರ್ಥ. ಸ್ಮಾರ್ಥ ಎಂದು ಮಹಾಪ್ರಾಣಾಕ್ಷರ ಥ ಬಳಸಿ ಬರೆದರೆ ತಪ್ಪು. 

ಇ) ತುಷ್ಟೀಕರಣ ಸರಿ (ಪದ ಮಾತ್ರ, ಕ್ರಿಯೆ ಅಲ್ಲ). ತುಷ್ಟ ಅಂದರೆ ಸಂತೋಷಗೊಂಡ, ತೃಪ್ತಿ ಹೊಂದಿದ. ತುಷ್ಟಗೊಳಿಸುವುದೇ ತುಷ್ಟೀಕರಣ. ಅದನ್ನು ಠ ಮಹಾಪ್ರಾಣ ಒತ್ತಕ್ಷರ ಕೊಟ್ಟು ತುಷ್ಠೀಕರಣ ಎಂದು ಬರೆದರೆ ತಪ್ಪು.  

ಈ) ವರ್ಧಂತ್ಯುತ್ಸವ ಸರಿ. ವರ್ಧಂತೀ + ಉತ್ಸವ = ವರ್ಧಂತ್ಯುತ್ಸವ. ಯಣ್ ಸಂಧಿ. ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆಸುವ ಉತ್ಸವ. ಇದನ್ನು ವರ್ಧಂತ್ಯೋತ್ಸವ ಎಂದು ಗುಣಸಂಧಿ ಎಂಬಂತೆ ಬರೆಯುವುದು ತಪ್ಪು.

ಉ) ಬಾಲಬಡುಕ ಸರಿ. ಬಾಲಬುಡುಕ ಎಂದು ಬರೆದರೆ ತಪ್ಪು. ಬೆಕ್ಕು, ಹುಲಿ, ಸಿಂಹ ಮುಂತಾದ ಪ್ರಾಣಿಗಳು ಏಕಾಗ್ರತೆಯಲ್ಲಿರುವಾಗ ಅಥವಾ ಹೊಂಚುಹಾಕುತ್ತಿರುವಾಗ ಬಾಲವನ್ನು ನೆಲಕ್ಕೆ ಬಡಿಯುತ್ತಾ(ಅಪ್ಪಳಿಸುತ್ತಾ) ಇರುತ್ತವೆ. ಕೆಲವು ನಾಯಕರಿಗೆ ಇಂಥ ಕೆಲಸ ಮಾಡಲು ಆಗದಿರುವಾಗ ಅದನ್ನು ಮಾಡಲೂ 'ಕೆಲವರು' ಸಹಾಯ ಮಾಡುತ್ತಾರೆ. ಇಂಥವರಿಗೆ 'ಬಾಲಬಡುಕರು' ಎನ್ನುವುದು. [ಈ ವಿವರಣೆ ಒದಗಿಸಿದವರು: ಹುಬ್ಬಳ್ಳಿಯಿಂದ ಅನಂತರಾಜ ಮೇಲಾಂಟ]
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries