HEALTH TIPS

ಡಾ.ವೈ.ಎಸ್.ಮೋಹನಕುಮಾರ್ ಅವರಿಗೆ 'ಸಮಕಾಲಿಕ' ಮಲಯಾಳಂ ಸಾಪ್ತಾಹಿಕದ ಸಾಮಾಜಿಕ ಸೇವಾ ಪ್ರಶಸ್ತಿ

 
       ಪೆರ್ಲ:ಕೇರಳ ತೋಟಗಾರಿಕಾ ನಿಗಮ ಕಾಸರಗೋಡಿನ ಗೇರು ತೋಟಗಳಲ್ಲಿ ಹೆಲಿಕಾಫ್ಟರ್ ಮೂಲಕ ಎಂಡೋಸಲ್ಫಾನ್ ಕೀಟ ನಾಶಕ ಸಿಂಪಡಿಸಿದುದರ ಪರಿಣಾಮ ಉಂಟಾದ ಆರೋಗ್ಯ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಎಂಡೋಸಲ್ಫಾನ್ ಸಿಂಪಡನೆ ವಿರುದ್ಧ ಹಾಗೂ ಪರಿಸರ ಹೋರಾಟದ ನೇತೃತ್ವ ವಹಿಸಿದ್ದ ವೈದ್ಯ, ಪರಿಸರ ಹಾಗೂ ಸಾಮಾಜಿಕ ಹೋರಾಟಗಾರ ಡಾ.ವೈ.ಎಸ್.ಮೋಹನಕುಮಾರ್ ಅವರು 'ಸಮಕಾಲಿಕ' ಮಲಯಾಳಂ ಸಾಪ್ತಾಹಿಕದ 2019ರ ಸಾಮಾಜಿಕ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
      ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪೂರ್ತಿಗೊಳಿಸಿದ ಮೋಹನಕುಮಾರ್ ತಂದೆಯ ಸಲಹೆಯಂತೆ 1982ರಲ್ಲಿ ಸಾರಿಗೆ ಇತರ ಮೂಲ ಸೌಲಭ್ಯ ಗಳಿಂದ ವಂಚಿತ ಕೇರಳ ಕರ್ನಾಟಕ ಗಡಿಪ್ರದೇಶ ಎಣ್ಮಕಜೆ ಪಂಚಾಯಿತಿಯ ವಾಣೀನಗರದಲ್ಲಿ ಪುಟ್ಟ ಕ್ಲಿನಿಕ್ ತೆರೆದು ವೈದ್ಯ ಸೇವೆ ಆರಂಭಿಸಿದ್ದರು. ಬಳಿಕ ಕುಂಬ್ಡಾಜೆ ಪಂಚಾಯಿತಿಯ ಏತಡ್ಕ ಹಾಗೂ ಎಣ್ಮಕಜೆ ಪಡ್ರೆ ಗ್ರಾಮದ ಸ್ವರ್ಗದಲ್ಲಿ ಕ್ಲಿನಿಕ್ ತೆರೆದು ಕಳೆದ 36 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದಾರೆ.
       1990-2000 ದಶಕದಲ್ಲಿ ಕ್ಲಿನಿಕ್ ಗೆ ಬರುವ ರೋಗಿಗಳ ಸಂಖ್ಯೆಯಲ್ಲಿನ ಧಿಡೀರ್ ಹೆಚ್ಚಳ, ಮಾನಸಿಕ ಅನಾರೋಗ್ಯ, ಅಂಗವಿಕಲತೆ, ಗರ್ಭಪಾತ, ಗರ್ಭ ಧರಿಸದಿರುವಿಕೆ, ಚರ್ಮ ರೋಗ, ಮತ್ತಿತರ ಪತ್ತೆಹಚ್ಚಲು ಸಾಧ್ಯವಾಗದ ರೋಗಗಳು ಡಾ.ಮೋಹನ್ ಕುಮಾರ್ ಅವರನ್ನು ಚಿಂತಿಸುವಂತೆ ಮಾಡಿತು.ತೋಟಗಾರಿಕಾ ನಿಗಮದ ಗೇರುತೋಟಕ್ಕೆ ಹೆಲಿಕಾಫ್ಟರ್ ಮೂಲಕ ಸಿಂಪಡಿಸಿದ ಎಂಡೋಸಲ್ಫಾನ್ ಈ ಎಲ್ಲಾ ರೋಗಗಳಿಗೆ ಮೂಲಕಾರಣ ಎಂಬುದು ಅವರು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿತ್ತು.
      ಸೇವಾ ವ್ಯಾಪ್ತಿಯನ್ನೂ ಮೀರಿ ಸಾಮಾಜಿಕ ಕಾಳಜಿ, ಪರಿಸರ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿದ ಡಾ.ಮೋಹನಕುಮಾರ್, ಪರಿಸರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಪಡ್ರೆ ಅವರೊಂದಿಗೆ ಚರ್ಚಿಸಿ ಎಂಡೋಸಲ್ಫಾನ್ ಕೇವಲ ಗೇರು ತೋಟದ ಕ್ರಿಮಿ ಕೀಟಗಳನ್ನಷ್ಟೇ ಅಲ್ಲದೆ ಜನರನ್ನೂ ಕೊಲ್ಲುವ ಮಾರಕ ವಿಷ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದರು. ಎಂಡೋಸಲ್ಫಾನ್ ಸಿಂಪಡನೆ ವಿರುದ್ಧ ಹೋರಟದ ಫಲವಾಗಿ ಎಂಡೋಸಲ್ಫಾನ್ ಸಿಂಪಡನೆಗೆ ನ್ಯಾಯಾಲಯ ತಡೆ ಆಜ್ಞೆ ವಿಧಿಸಿದ್ದು ರೋಗ ಬಾಧಿತರಿಗೆ ನಷ್ಟ ಪರಿಹಾರ ನೀಡುವಂತೆ ಆದೇಶಿಸಿದ್ದು ಸರಕಾರ ಪರಿಹಾರ ಧನ ವಿತರಿಸಿತ್ತು.
      ನಿವೃತ್ತ ಶಿಕ್ಷಕ ಏತಡ್ಕ ಕುಮಾರ ನಿವಾಸದ ದಿ.ಸುಬ್ರಾಯ ಭಟ್, ದಿ.ಗಂಗಮ್ಮ ದಂಪತಿಗಳ ಪುತ್ರ ಮೋಹನ ಕುಮಾರ್ ಏತಡ್ಕ ಶಾಲಾ ಶಿಕ್ಷಣದ ಬಳಿಕ ಪುತ್ತೂರಿನ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಕೈರಳಿ ಬೆಸ್ಟ್ ಡಾಕ್ಟರ್, ಮಲೇಷಿಯಾ ಗ್ರೀನ್ ಗ್ಲೋಬ್ ಮತ್ತಿತರ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಮೋಹನ್ ಕುಮಾರ್ ಅವರ ಪತ್ನಿ ರತ್ನ ಶಂಕರಿ, ಮಕ್ಕಳು ರಮ್ಯ (ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಅರ್ಬುದ ಶಸ್ತ್ರ ಚಿಕಿತ್ಸಕಿ), ಕಾವ್ಯ ಬದಿಯಡ್ಕದಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿದ್ದಾರೆ.
        ಸಾಮಾಜಿಕ ಹಾಗೂ ಜನಪರ ಕಾಳಜಿಯ ಹೋರಾಟದಲ್ಲಿ ನೇತೃತ್ವ ವಹಿಸಿದ್ದ ಅಗ್ರಗಣ್ಯರಿಗೆ ನೀಡಲಾಗುವ 'ಸಮಕಾಲಿಕ' ಸಾಮಾಜಿಕ ಸೇವಾ ಪ್ರಶಸ್ತಿ ಒಂದು ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries