HEALTH TIPS

ನಾರಾಯಣಮಂಗಲದಲ್ಲಿ ಸಂಪನ್ನಗೊಂಡ ಹೇಮಂತ ಸಾಹಿತ್ಯೋತ್ಸವ-ಸಿರಿಗನ್ನಡ ವೇದಿಕೆಯ ಕನ್ನಡ ವ್ಯಾಪಕತೆಗೆ ಅಳಿಲ ಸೇವೆಯ ಮೂಲಕ ಗುರುತಿಸಿಕೊಂಡಿದೆ-ಎಂ.ಎಸ್.ವೆಂಕಟರಾಮಯ್ಯ


         ಕುಂಬಳೆ: ಸಾಹಿತ್ಯ ಕ್ಷೇತ್ರದ ಹೊಸ ತಲೆಮಾರಿನ ಸೃಷ್ಟಿಗೆ ಪ್ರೇರಣೆಯಾಗಿ ಸಿರಿಗನ್ನಡ ವೇದಿಕೆ ನಾಡು-ನುಡಿಗೆ ನೀಡುತ್ತಿರುವ ಕೊಡುಗೆ ಗಮನಾರ್ಹವಾದುದು. ಸಿರಿಗನ್ನಡ ವೇದಿಕೆ ಕರ್ನಾಟಕದ ಹೊರ ರಾಜ್ಯಗಳಲ್ಲೂ, ಸಾಗರದಾಚೆಗೂ ವ್ಯಾಪಿಸುವ ಮೂಲಕ ಸಮಗ್ರ ಕನ್ನಡ ಭಾಷೆ, ಸಾಂಸ್ಕøತಿಕ ಪರಂಪರೆಯ ವಿಶ್ವ ವ್ಯಾಪಕತೆಗೆ ಅಳಿಲ ಸೇವೆ ಸಲ್ಲಿಸುತ್ತಿದೆ ಎಂದು ಸಿರಿಗನ್ನಡ ವೇದಿಕೆಯ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟರಾಮಯ್ಯ ಬೆಂಗಳೂರು ಅವರು ತಿಳಿಸಿದರು.
         ಸಿರಿಗನ್ನಡ ವೇದಿಕೆ ಬೆಂಗಳೂರು, ಕಾಸರಗೋಡು ಕೇರಳ ಘಟಕದ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ನಾರಾಯಣಮಂಗಲದ ಕುಳಮರ್ವ ಶ್ರೀನಿಧಿ ಯಲ್ಲಿ ಆಯೋಜಿಸಲಾಗಿದ್ದ ಹೇಮಂತ ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
        ಸಿರಿಗನ್ನಡ ವೇದಿಕೆ ಕಾಸರಗೋಡು ಗಡಿನಾಡ ಘಟಕದ ಚಟುವಟಿಕೆ ಸ್ತುತ್ಯರ್ಹವಾದುದು. ಬಹುಮುಖ ಆಯಾಮದ ಮೂಲಕ ಗಡಿನಾಡ ಘಟಕದ ನಿರಂತರ ವೈವಿಧ್ಯಮಯ ಯೋಜನೆಗಳು ಇನ್ನಷ್ಟು ವ್ಯಾಪಕಗೊಳ್ಳಲಿ. ನೂತನ ಮಹಿಳಾ ಘಟಕ ಕಾರ್ಯಶೀಲವಾಗಲಿ ಎಂದು ಹಾರೈಸಿದರು.
         ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಅರ್ಥಧಾರಿ, ಪ್ರವಚನಕಾರ ವಿದ್ವಾನ್ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ಮಾತನಾಡಿ, ಸಾಹಿತ್ಯ ಚಟುವಟಿಕೆಗಳು ಸಮಾಜದ ನಿರಾಳತೆಗೆ ಕಾರಣವಾಗುತ್ತದೆ. ಮನೆಮನೆಗಳಲ್ಲಿ ನಿರಂತರ ಸಾಹಿತ್ಯ ಕಾರ್ಯಕ್ರಮಗಳು ಆಯೋಜನೆಗೊಳ್ಳುವ ಮೂಲಕ ಜಾಗೃತ ಸಮಾಜ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗುವುದು ಎಂದು ತಿಳಿಸಿದರು.
        ಉಪಸ್ಥಿತರಿದ್ದು ಮಾತನಾಡಿದ ಸರ್ಕಾರದ ವಾರ್ತಾ ಇಲಾಖೆಯ ಜಿಲ್ಲಾ ಕನ್ನಡ ಮಾಧ್ಯಮ ಅಧಿಕಾರಿ ವೀ.ಜಿ.ಕಾಸರಗೋಡು ಅವರು ಮಾತನಾಡಿ, ಗಡಿನಾಡಿನ ಕನ್ನಡ ಹೋರಾಟದ ದಿಕ್ಕು ಹೊಸತನದತ್ತ ಹೊರಳಬೇಕಾದ ಕಾಲ ಸನ್ನಿಹಿತವಾಗಿದೆ. ಇಂತಹ ಕ್ರಾಂತಿ ಕಲೆ-ಸಾಹಿತ್ಯಗಳಿಂದ ಮಾತ್ರ ಸಾಧ್ಯ ಎಂದರು. ಕಾಸರಗೋಡಿನ ಕನ್ನಡ ಅಸ್ಮಿತೆಯ ವ್ಯಾಪಕತೆಗೆ ಸಾಹಿತ್ಯ ಚಟುವಟಿಕೆಗಳು ಎಲ್ಲೆಡೆ ಸಂಘಟಿಸಲ್ಪಡಬೇಕು. ಈ ಮೂಲಕ ಭಾಷೆ, ಸಂಸ್ಕøತಿಯ ವರ್ತಮಾನದ ಕಾಯ್ದುಕೊಳ್ಳುವಿಕೆಯ ಬಗೆಗಿನ ಹೊಳಹುಗಳು ಜನಸಾಮಾನ್ಯರಿಗೆ ಮುಟ್ಟಬಲ್ಲದು ಎಂದರು.
    ಸಮಾರಂಭದಲ್ಲಿ ಕಣ್ಣೂರು ವಿಶ್ವ ವಿದ್ಯಾನಿಲಯದಿಂದ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಅವರ ನಿರ್ದೇಶನದಲ್ಲಿ ಯಕ್ಷಗಾನ ಭಾಗತವತಿಕೆ, ತೆಂಕು-ಬಡಗು ಅವಲೋಕನ ವಿಷಯದಲ್ಲಿ ಪ್ರಬಂಧ ಮಂಡಿಸಿ ಪಿಎಚ್‍ಡಿ ಪದವಿ ಗಳಿಸಿದ ಹವ್ಯಾಸಿ ಯಕ್ಷಗಾನ ಭಾಗವತ, ಪೆರ್ಲ ಶಾಲಾ ಶಿಕ್ಷಕ ಡಾ.ಸತೀಶ ಪುಣ್ಚಿತ್ತಾಯ ಪೆರ್ಲ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
    ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸಾಹಿತ್ಯ, ಕಲಾ ಚಟುವಟಿಕೆಗಳು ಸಮಾಜದ ನಿರಂತರ ಕಾರ್ಯಶೀಲತೆಗೆ ಪ್ರೇರಣೆ ನೀಡಿ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ಸಾಧನೆಗೈದು ಮಾದರಿಯಾದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಮಾದರಿ ಸಮಾಜದ ಕರ್ತವ್ಯವೂ ಹೌದು ಎಂದರು.
       ಸಿರಿಗನ್ನಡ ವೇದಿಕೆಯ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರಿಗೆ ರಾಜ್ಯಾಧ್ಯಕ್ಷರು ಅಧಿಕಾರದ ಪ್ರಮಾಣಪತ್ರ, ಲಾಂಛನ ನೀಡಿ ಹಾರೈಸಿದರು. ಜೊತೆಗೆ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರದ್ದಾ ನಾಯರ್ಪಳ್ಳ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ನಾಯರ್ಪಳ್ಳ ಸಹೋದರಿಯರಾದ ಶ್ರದ್ದಾ ಹಾಗೂ ಮೇಧಾ ಅವರಿಂದ ಗಮಕ ವಾಚನ-ವ್ಯಾಖ್ಯಾನ ನಡೆಯಿತು. ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಭಗವದ್ಗೀತಾ ಪಾರಾಯಣದಲ್ಲಿ ಪ್ರಥಮ ಸ್ಥಾನ ಪಡೆದ ಬಾಲ ಪ್ರತಿಭೆ ಕು.ಸಮೃತಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಟಿ.ಶಂಕರನಾರಾಯಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.
       ವಿಶೇಷವಾಗಿ ಸಂಘಟಿಸಲಾದ ಕವಿಗೋಷ್ಠಿಯಲ್ಲಿ ಶಶಿಕಲಾ ಕುಂಬಳೆ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಚೇತನ ಕುಂಬಳೆ, ಪುರುಷೋತ್ತಮ  ಭಟ್ ಕೆ. ಸ್ವರಚಿತ ಕವನಗಳನ್ನು ವಾಚಿಸಿದರು. ಸಮೃತ ಪ್ರಾರ್ಥನೆ ಹಾಡಿದರು. ಸಿರಿಗನ್ನಡ ವೇದಿಕೆ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರದ್ದಾ ನಾಯರ್ಪಳ್ಳ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries