ಕುಂಬಳೆ: ರಾಜ್ಯ ವ್ಯಾಪಕವಾಗಿ ಗ್ರಂಥಾಲಯಗಳು ನಡೆದು ಬಂದ ಇತಿಹಾಸ ಪ್ರತಿ ಹೆಜ್ಜೆಯಲ್ಲೂ ಯಶಸ್ವಿಯಾಗಿದೆ. ಆದ್ದರಿಂದ ಕೇರಳವು ಶೇ.100ರ ಸಾಕ್ಷರ ರಾಜ್ಯವಾಗಿ ವಿಶ್ವಕ್ಕೇ ಸಾಕ್ಷಿಯಾಗಿದೆ ಎಂದು ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಪಿ.ವಿ.ಕೆ.ಪನೆಯಾಲ ಅವರು ತಿಳಿಸಿದರು.
ರಾಜ್ಯ ಲೈಬ್ರರಿ ಕೌನ್ಸಿಲ್ ವಜ್ರ ಮಹೋತ್ಸವದ ಅಂಗವಾಗಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನೇತೃತ್ವದಲ್ಲಿ ಭಾನುವಾರ ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ವಜ್ರಮಹೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ನೆಲೆಗೊಂಡಿರುವ ರಾಜ್ಯ ಲೈಬ್ರರಿ ಕೌನ್ಸಿಲ್ ನ ಗ್ರಂಥಾಲಯಗಳು ಕತ್ತಲನ್ನು ತುಂಬಿದ ಸಮಾಜದಲ್ಲಿ ಬೆಳಕಾಗಿ ದೀವಿಗೆ ಹಿಡಿಯುತ್ತಿದೆ. ಸಮಾಜದಲ್ಲಿ ತಾಂಡವವಾಡುತ್ತಿರುವ ಮೂಢ ನಂಬಿಕೆ ನಾಶವಾಗಿ, ವೈಜ್ಞಾನಿಕತೆಯಲ್ಲಿ ಬದುಕುವ ಸೆಲೆ ಎಲ್ಲೆಡೆ ವ್ಯಾಪಿಸಬೇಕು. ರಾಜ್ಯದಲ್ಲೇ ತಿಂಗಳ ಕಾರ್ಯಕ್ರಮಗಳನ್ನು ಸಮರ್ಥವಾಗಿ ಸಂಘಟಿಸುವ ಜಿಲ್ಲೆಗಳ ಪೈಕಿ ಕಾಸರಗೋಡು ಮೂರನೇ ಸ್ಥಾನದಲ್ಲಿರುವುದು ಸ್ತುತ್ಯರ್ಹವಾಗಿ ಚಟುವಟಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಯು.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಎ.ಕೆ.ಶಶಿಧರನ್, ರಾಧಾಕೃಷ್ಣ ಪೆರುಂಬಳ, ಸಿದ್ದೀಕ್ ಅಲಿ ಮೊಗ್ರಾಲ್, ಕೃಷ್ಣವೇಣಿ ಕಿದೂರು, ಮಲಾರ್ ಜಯರಾಮ ರೈ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ಸಂದರ್ಭ ನಿವೃತ್ತ ಶಿಕ್ಷಕ, ಹವ್ಯಾಸಿನ ಕಲಾವಿದ, ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಬಟ್ ಅವರನ್ನು ಗ್ರಂಥಾಲಯ ಚಟುವಟಿಕೆಗಳ ಸುಧೀರ್ಘ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಲೈಬ್ರರಿಗಳ ಅಧ್ಯಕ್ಷರುಗಳಾದ ಶ್ರೀನಿವಾಸ ಭಂಡಾರಿ, ನಾರಾಯಣ ಶೆಟ್ಟಿ, ಎ.ಬಿ.ರಾಧಾಕೃಷ್ಣ ಬಲ್ಲಾಳ್ ಅವರನ್ನು ಖಾದಿ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.
ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಿ.ಕಮಲಾಕ್ಷ ವಂದಿಸಿದರು. ಬಳಿಕ ಇತ್ತೀಚೆಗೆ ನಿಧನರಾದ ತಾಲೂಕು ಲೈಬ್ರರಿ ಕೌನ್ಸಿಲ್ ಮುಖಂಡ, ಸಾಹಿತ್ಯ ಸಾಂಸ್ಕøತಿಕ ಸಾಧಕ ದಿ.ಎಚ್.ಎ.ಮೊಹಮ್ಮದ್ ಮಾಸ್ತರ್ ಸಂಸ್ಮರಣೆ ನಡೆಯಿತು. ಮೊಹಮ್ಮದ್ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ.ಕೆ.ಪನೆಯಾಲ ಹಾಗೂ ಎಸ್.ನಾರಾಯಣ ಬಟ್ ಸಂಸ್ಮರಣಾ ಭಾಷಣ ಮಾಡಿದರು. ಶ್ರೀಕುಮಾರಿ ಟೀಚರ್ ಸ್ವಾಗತಿಸಿ, ಜಯಂತ ಎಂ.ವಂದಿಸಿದರು. ಈ ಸಂದರ್ಭ ಗಾಂಧಿ ಸ್ಮøತಿ ಹಾಗೂ ಗ್ರಂಥಾಲಯ ಚಳವಳಿ ವಿಚಾರ ಸಂಕಿರಣ ನಡೆಯಿತು. ಅಂಬುಜಾಕ್ಷನ್ ಮಾಸ್ತರ್ ವಿಷಯ ಮಂಡನೆ ನಡೆಸಿದರು. ನಾರಾಯಣ ಮಾಸ್ತರ್ ಮಳಿ ಪಾಲ್ಗೊಂಡರು. ಉಮೇಶ ಅಟ್ಟೆಗೋಳಿ ಸ್ವಾಗತಿಸಿ, ಉದಯ ಸಾರಂಗ ವಂದಿಸಿದರು. ಬಳಿಕ ರಾಘವನ್ ಬೆಳ್ಳಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಬೆಳಿಗ್ಗೆ ವಜ್ರಮಹೋತ್ಸವದ ಅಂಗವಾಗಿ ಕುಂಬಳೆ ಪೇಟೆಯಿಂದ ಕುಂಬಳೆ ಶಾಲೆಯವರೆಗೆ ಬೃಹತ್ ಮೆರವಣಿಗೆ ನಡೆಯಿತು.






