HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-30-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

                     ಇಂದಿನ  ಮೂರು ಟಿಪ್ಪಣಿಗಳು ಇಲ್ಲಿವೆ. 
1. ನಾಂದಿ ಎಂದರೇನು?

“2007ರ ವಿಶ್ವಕಪ್‌ ಗೆಲುವು ಭಾರತದಲ್ಲಿ ಐಪಿಎಲ್ ಆರಂಭಕ್ಕೆ ನಾಂದಿಯಾಯಿತು.",  “ಸರಳಗನ್ನಡದ ವಚನ ಸಾಹಿತ್ಯವು ನಡುಗನ್ನಡ ಸಾಹಿತ್ಯಕ್ಕೆ ನಾಂದಿಯಾಯಿತು.", “ನೆಹರು ಮಾಡಿದ ಒಂದು ತಪ್ಪು ನಿರ್ಣಯದಿಂದಾಗಿ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಅನಿವಾರ್ಯವಾಗಿ ವಿಶೇಷ ಸ್ಥಾನಮಾನ ನೀಡುವಂತಾಗಿ ಅಂತಿಮವಾಗಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಗೆ ನಾಂದಿಯಾಯಿತು."

ಈ ಎಲ್ಲ ವಾಕ್ಯಗಳಲ್ಲಿ ಬಳಕೆಯಾಗಿರುವ ‘ನಾಂದಿ’ ಪದ, ಅದು ಪಡೆದಿರುವ ಅರ್ಥವಿಸ್ತಾರ, ಸ್ವಾರಸ್ಯಕರವಾದದ್ದು. 

“ಯಾವುದಾದರೂ ಶುಭಕರ್ಮ (ಉದಾ: ವಿವಾಹ, ಉಪನಯನ) ಪ್ರವರ್ತನೆಗೆ ಮುಂಚೆ ಪಿತೃಗಳನ್ನು ಆಹ್ವಾನಿಸಿ ಪ್ರಾರ್ಥಿಸುವ ಕ್ರಮಕ್ಕೆ ‘ನಾಂದಿ’ ಎಂದು ಹೆಸರು. ‘ನಾಂದೀಮುಖಾನ್ ಪಿತೃನ್ ವಾಚಯಿಷ್ಯೇ’ ಮೊದಲಾದ ಮಂತ್ರಗಳು ವೈದಿಕ ಗೃಹ್ಯಸೂತ್ರಗಳಲ್ಲಿ ಬರುತ್ತವೆ. ‘ನಂದ್’ ಎಂಬ ಸಂತೋಷಾರ್ಥಕ ಧಾತುವಿನಿಂದ ಹುಟ್ಟಿದ, ಶುಭಕರ್ಮಾರಂಭದ ನಾಂದಿ ಶಬ್ದವನ್ನೀಗ ಯಾವುದೇ ಘೋರ ಕೃತ್ಯದ ಆರಂಭಕ್ಕೂ ಆಲಂಕಾರಿಕವಾಗಿ ಪ್ರಯೋಗಿಸುವುದು ವೈಪರೀತ್ಯವೇ. ‘ನಾಂದಿಯಾಯಿತು’ವನ್ನೇ ‘ನಾಂದಿ ಹಾಡಿತು’ ಎಂದು ಕೂಡ ಬರೆಯುವುದಿದೆ. ಇದು ಕೂಡ ವೈದಿಕ ನಾಂದಿಯಿಂದಲೇ ಕವಲೊಡೆದ, ನಾಟಕ ಪರಿಭಾಷೆಗೆ ಸೇರಿದ ಪದಪುಂಜ. ನಾಟಕದ ಆದಿಯಲ್ಲಿ ಕವಿ ತನ್ನ ಇಷ್ಟದೇವತೆಯನ್ನು ಕುರಿತು ಬರೆದ ಪದ್ಯವನ್ನು ಹಾಡುವುದು ಸಂಸ್ಕೃತ ರಂಗಭೂಮಿಯ ಸಂಪ್ರದಾಯ. ಇದೇ ನಾಟಕದ ನಾಂದಿ. ‘ನಾಂದಿ ಹಾಡುವುದು’ ಅಂದರೆ ವಿಧಿವತ್ತಾಗಿ ಪ್ರದರ್ಶನ ಕಾರ್ಯಾರಂಭ ಮಾಡುವುದೆಂದು ತಾತ್ಪರ್ಯ" - ಎನ್ನುತ್ತಾರೆ ಪದಾರ್ಥಚಿಂತಾಮಣಿಯಲ್ಲಿ ಪಾ ವೆಂ ಆಚಾರ್ಯರು.

ಈಗ ಬೇಕಿದ್ದರೆ, “ಅಮೆರಿಕ-ಇರಾನ್ ಜಂಗಿಕುಸ್ತಿಯು ಮೂರನೆಯ ಮಹಾಯುದ್ಧಕ್ಕೆ ನಾಂದಿ ಹಾಡುವುದೇ?" ಎಂದು ಕನ್ನಡ ಸುದ್ದಿವಾಹಿನಿಗಳು ಕುಣಿದಾಡಬಹುದು. ಎಷ್ಟೆಂದರೂ “ಯುದ್ಧಕ್ಕೆ ಮೂರೇ ಗೇಣು!" ಎನ್ನುತ್ತ ತುದಿಗಾಲಲ್ಲಿ ಕಾದು ನಿಂತಿರುವ ಅವುಗಳಿಗೆ ಯುದ್ಧವು ಸಂತೋಷದ ವಿಷಯವೇ ತಾನೆ?

===
೨. ಮೂರು ಫಲಕಗಳಲ್ಲಿ ಮೂಡಿರುವ ಅತಿ ಸ್ವಚ್ಛ ಕನ್ನಡ

ಅ) “ಪವಿತ್ರ ಪರಿಮಳ ಪ್ರಸಾದ ತಾಯರಿ ಮಾಡುವ ಕೇಂದ್ರಲ್ಲಿ ಸೆವೆ ಮಾಡಬೆಕೆಂದು ಕೊಂಡವರು 5 ಇಲ್ಲ 10 ನಿಮಿಷ ಗುರು ರಾಯರ ಸೆವೆಯಲ್ಲಿ ಬಾಗಸ್ವಾಮಿಗಳಗಿರಿ". - ಮಂತ್ರಾಲಯ ಮಹಾತ್ಮೆ [ಗಮನಿಸಿ ಕಳುಹಿಸಿದವರು ರವೀಂದ್ರನಾಥ ಬೆಂಗಳೂರು.]

ಆ) “ಅನ್ನದಾತೋ ಸುಖಿನೋಭವ. ಹೊಟ್ಟೆ ಹಸಿದಾಗ ನೆನಪಾಗುವುದು ಹೊಟೇಲ್ ಬೆಳಗ್ಗಿನಿಂದ ಸಂಜೆವರೆಗೆ ಎಲ್ಲರ ಹೊಟ್ಟೆ ತುಂಬಿಸುತ್ತಾ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಒಂದು ಸೇವಾ ಮನೋಭಾವದ ಉಧ್ಯಮವೇ ಹೊಟೇಲ್. ಪ್ರತಿಯೋಬ್ಬ ಕಾರ್ಮಿಕನೂ ಗ್ರಾಹಕರನ್ನು ನಗುಮೊಗದಿಂದ ಸ್ವಾಗತಿಸಿ ಬಿಸಿಬಿಸಿಯಾದ ತಿನಿಸನ್ನು ನೀಡಿ ಗ್ರಾಹಕನು ತೃಪ್ತಿಯಿಂದ ಕೈ ತೊಳೆದಾಗ ತನ್ನ ಶ್ರಮಕ್ಕೆ, ಪಡೆದ ಹಣಕ್ಕೆ ಗೌರವ ಸಿಕ್ಕಂತಾಗುತ್ತದೆ. ಹೊಟೇಲ್ ಕೇವಲ ವ್ಯಾಪಾರ ಕೇಂದ್ರವಲ್ಲ ಅನೇಕ ಬಡ ಕಾರ್ಮಿಕರ ಬದುಕೂ ಹೌದು ಅವರನ್ನು ಗೌರವದಿಂದ ಕಾಣಿ. ದಯವಿಟ್ಟು ಆಹಾರವನ್ನು ಕೇಡಿಸಬೇಡಿ." - ಇದು ‘ಕಲ್ಲೆಸೆದರೆ ಕನ್ನಡ ಕವಿಯ ಮನೆಯ ಮಾಡಿನ ಮೇಲೆ ಬೀಳುತ್ತದೆ’ ಎಂಬ ಖ್ಯಾತಿಯ ಧಾರವಾಡದಲ್ಲಿ ಒಂದು ಖಾನಾವಳಿಯಲ್ಲಿ ಕಂಡುಬಂದ ಫಲಕ. [ಗಮನಿಸಿ ಕಳುಹಿಸಿದವರು ಹುಬ್ಬಳ್ಳಿಯಿಂದ ಡಾ.ಗೋವಿಂದ ಹೆಗಡೆ]

ಇ) “ಹಲಿ ಇಲಿ ಕಸ ಏಸೆಯ ಬರದು. ದಂಡ" - ಫಲಕವನ್ನು ಬರೆದವರು (ಬರೆಸಿದವರು ಅಂತಲೇ ಇಟ್ಕೊಳ್ಳೋಣ) ತಮ್ಮ ಹೆಸರನ್ನೂ ಕೊನೆಯಲ್ಲಿ ಬರೆದುಕೊಂಡಿದ್ದಾರೆ, ಮತ್ತು ಆ ಮೂಲಕ ಪ್ರಪಂಚದಲ್ಲಿ ತಾವೇನು ಎಂದು ಜಾಹಿರುಪಡಿಸಿದ್ದಾರೆ. [ಗಮನಿಸಿ ಕಳುಹಿಸಿದವರು ಧಾರವಾಡದಿಂದ ಕೃಷ್ಣಾ ಕೌಲಗಿ]

===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು

ಅ) ಚತುರುಪಾಯ ಸರಿ. ಚತುರ್ + ಉಪಾಯ. ಸಾಮ, ದಾನ, ಭೇದ, ದಂಡ ಎಂಬ ನಾಲ್ಕು (ಚತುರ್) ಉಪಾಯಗಳು. ಆದರೆ ಇದನ್ನು ಚತುರೋಪಾಯ (ಚತುರ + ಉಪಾಯ = ಚತುರೋಪಾಯ. ಗುಣಸಂಧಿ) ಎಂದು ಬೇರೆಯೇ ಅರ್ಥದಲ್ಲಿ ಬಳಸುವುದು ರೂಢಿಯಲ್ಲಿದೆ.

ಆ) ಹೃದಯಾಘಾತ ಸರಿ. ಹೃದಯ + ಆಘಾತ = ಹೃದಯಾಘಾತ. ಸವರ್ಣದೀರ್ಘ ಸಂಧಿ. “ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನರಾದರು" ಎನ್ನುತ್ತವೆ ಸುವರ್ಣ ನ್ಯೂಸ್, ವಾರ್ತಾಭಾರತಿ ಆನ್‌ಲೈನ್ ಆವೃತ್ತಿಗಳು [ಗಮನಿಸಿ ಕಳುಹಿಸಿದವರು: ರವಿ ಜಾನೇಕಲ್]. ಭಾಷೆ ಇಲ್ಲದ ಪತ್ರಕರ್ತರು ‘ಹೃದಯಘಾತ’ ಎಂದು ಬರೆದುದನ್ನು ಓದಿದರೆ ರವಿರಾಜ ವಳಲಂಬೆಯವರಿಗೆ ನಿಧನಾನಂತರವೂ ಹೃದಯಾಘಾತವಾದೀತೋ ಏನೋ!

ಇ) ತಪ್ಪುಗಾರ ಸರಿ. ತಪ್ಪು ಮಾಡಿದವನು ತಪ್ಪುಗಾರ. ಆದರೆ ರೂಢಿಯಲ್ಲಿ ‘ತಪ್ಪಿತಸ್ಥ’ ಎಂಬ ಪದಬಳಕೆ ಇದೆ. ಧ್ಯಾನಸ್ಥ, ವ್ರತಸ್ಥ, ಗೃಹಸ್ಥ, ಕುಟುಂಬಸ್ಥ ಮುಂತಾದ ಪದಗಳಂತೆಯೇ ಎಂದುಕೊಂಡು ‘ತಪ್ಪಿತಸ್ಥ’ ಹುಟ್ಟಿಕೊಂಡಿರಬಹುದು. ಆದರೆ ಗಮನಿಸಬೇಕಾದ್ದೇನೆಂದರೆ- ಧ್ಯಾನ, ವ್ರತ, ಗೃಹ, ಕುಟುಂಬ ಮುಂತಾದುವು ಸಂಸ್ಕೃತ ಪದಗಳು; ಅವುಗಳಿಗೆ ಸ್ಥ ಪ್ರತ್ಯಯ ಸೇರಬಹುದು. ತಪ್ಪು ಎಂಬುದು ಅಚ್ಚಕನ್ನಡ ಪದ. ಅದು ತಪ್ಪಿತ ಆಗಿ ಅದಕ್ಕೆ ಮಹಾಪ್ರಾಣ ಒತ್ತಕ್ಷರವಿರುವ ಸ್ಥ ಪ್ರತ್ಯಯ ಸೇರುವುದು ಅಚ್ಚಕನ್ನಡ ಪದವಾಗಲಿಕ್ಕೆ ಸಾಧ್ಯವೇ ಇಲ್ಲ! 

ಈ) ರೂಪರೇಖೆ ಸರಿ. Outline ಅಥವಾ blueprint ಎಂಬ ಇಂಗ್ಲಿಷ್ ಪದಕ್ಕೆ ಸಮಾನಾರ್ಥಕವಾಗಿ ಬಳಕೆಯಾಗುವ ಪದ. ಆದರೆ ಇದು ರೂಪರೇಷೆ ಅಥವಾ ರೂಪುರೇಷೆ ಎಂದು ತಪ್ಪು ರೂಪದಲ್ಲೇ ಹೆಚ್ಚು ಪ್ರಚಲಿತದಲ್ಲಿದೆ.

ಉ) ಕೊಳೆಗೇರಿ ಸರಿ. ಕೊಳೆ + ಕೇರಿ = ಕೊಳೆಗೇರಿ. ಆದೇಶಸಂಧಿ. ಕೊಳಗೇರಿ ಎಂದು ತಪ್ಪಾಗಿ ಬರೆಯುವುದು ರೂಢಿಯಲ್ಲಿದೆ. ಪತ್ರಿಕೆಗಳೂ ಕೊಳಗೇರಿ ಎಂದು ಬರೆಯುತ್ತವೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕಚೇರಿಯ ಫಲಕದಲ್ಲೂ ‘ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ’ ಎಂದು ಇದೆ. ಅದು ‘ಕೊಳೆಗೇರಿ’ ಎಂದಾಗಬೇಕು. [ಗಮನಿಸಿ ಕಳುಹಿಸಿದವರು: ಪ್ರದೀಪ ಜೋಶಿ, ಬೆಂಗಳೂರು]
                                                           ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries