ಬದಿಯಡ್ಕ: ಮುಳ್ಳೇರಿಯಾ ಮಂಡಲ ಪೆರಡಾಲ ವಲಯ ಹವ್ಯಕ ಸಭೆಯು ಕೊಂಬ್ರಾಜೆ ಘಟಕದ ಕೋಳಾರಿ ಗೋಪಾಲಭಟ್ ಅವರ ನಿವಾಸದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಆರಂಭದಲ್ಲಿ ಗೋಪಾಲ ಭಟ್ ಧ್ವಜಾರೋಹಣಗೈದು ಚಾಲನೆ ನೀಡಿದರು. ಶಂಖನಾದ ಗುರುವಂದನೆಗಳೊಂದಿಗೆ ಸಭೆ ಪ್ರಾರಂಭವಾಯಿತು. ವಲಯಾಧ್ಯಕ್ಷ ಪದ್ಮರಾಜ ಪಟ್ಟಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿಷ್ಣುಪ್ರಸಾದ ಕೋಳಾರಿ ವಲಯ ವರದಿ ಹಾಗೂ ಮಂಡಲದಿಂದ ಬಂದ ಸುತ್ತೋಲೆಗಳನ್ನು ಸಭೆಯಲ್ಲಿ ಮಂಡಿಸಿ ಸಭಾ ನಿರ್ವಹಣೆ ಮಾಡಿದರು.
ಸಭೆಯಲ್ಲಿ ದೀಪಕಾಣಿಕೆ ಹಾಗೂ ಬೆಳೆ ಸಮರ್ಪಣೆಯ ಘಟಕವಾರು ದಿನಾಂಕ ನಿಗದಿಮಾಡಿ ಘಟಕ ಸಭೆಯೊಂದಿಗೆ ಜರಗಿಸಲು ತೀರ್ಮಾನಿಸಲಾಯಿತು. ಘಟಕಾಧ್ಯಕ್ಷರಿಗೆ ಶ್ರೀ ಗುರುಗಳು ಅನುಗ್ರಹಪೂರ್ವಕ ನೀಡುವ ರಾಯಸವನ್ನು ಗುರಿಕ್ಕಾರರಿಗೆ ವಿತರಿಸಲಾಯಿತು. ಜ. 26. ರಂದು ಪೆರಾಜೆ ಮಾಣಿಮಠದಲ್ಲಿ ಶ್ರೀಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಜರಗಲಿರುವ ವಾರ್ಷಿಕೋತ್ಸವ, ಸೂತ್ರಸಂಗಮ ಬಗ್ಗೆ ಸಭೆಗೆ ತಿಳಿಸಲಾಯಿತು. ವಲಯದ ಇಬ್ಬರು ವಿದ್ಯಾರ್ಥಿಗಳಿಗೆ ಶ್ರೀ ರಾಮಚಂದ್ರಾಪುರ ಮಠದಿಂದ ಕೊಡಲ್ಪಡುವ ವಿದ್ಯಾರ್ಥಿ ಸಹಾಯ ನಿಧಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿರೀಕ್ಷಕರಾಗಿ ಆಗಮಿಸಿದ ಮಂಡಲ ಶಿಷ್ಯಮಾಧ್ಯಮ ಪ್ರಮುಖ ಬಳ್ಳಮೂಲೆ ಗೋವಿಂದ ಭಟ್ ಅವರು ಸಮಾಜ,ಸಂಘಟನೆ, ವಿವಿಧ ಯೋಜನೆಗಳು, ಮೂಲಮಠ ಅಶೋಕೆ ಹಾಗೂ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.





