ಉಪ್ಪಳ: ಉಡುಪಿ ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಸರ್ವಜ್ಞಪೀಠವನ್ನೇರಲಿರುವ ಅದಮಾರು ಮಠದ ಪರಮಪೂಜ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರು ಶನಿವಾರ ಪೂರ್ವಾಹ್ಣ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಚಿತ್ತೈಸಿದರು.
ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತಾದಿಗಳು ಪೂಜ್ಯ ಶ್ರೀಗಳವರನ್ನು ಚೆಂಡೆ ಜಾಗಟೆ, ಪೂರ್ಣಕುಂಭದೊಡನೆ ಬರಮಾಡಿಕೊಂಡರು.
ಬಳಿಕ ನಡೆದ ಯತಿವಂದನಾ ಕಾರ್ಯಕ್ರಮದಲ್ಲಿ ಶ್ರೀಮಠದ ವತಿಯಿಂದ ಶ್ರೀಗಳನ್ನು ಗೌರವಿಸುವುದರ ಜೊತೆಗೇ ಧಾರ್ಮಿಕ ಕ್ಷೇತ್ರಗಳ ಪ್ರಮುಖರು ತಮ್ಮ ಕ್ಷೇತ್ರದ ವತಿಯಿಂದ ಫಲಪುಷ್ಪ ನೀಡಿ ಆಶೀರ್ವಾದವನ್ನು ಪಡಕೊಂಡರು. ನಂತರ ಪೂಜ್ಯ ಅದಮಾರು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಮನುಷ್ಯ ತನ್ನ ಜೀವನದ ಒಂದು ಗಳಿಗೆಯೂ ವ್ಯರ್ಥವಾಗದಂತೆ, ಜ್ಞಾನಪಿಪಾಸುಗಳಾಗಿ , ಭಗವಂತನನ್ನು ಪಡೆಯಬೇಕು ಎಂದರು. ಪೂಜ್ಯ ಕೊಂಡೆವೂರು ಶ್ರೀಗಳು ಪ್ರಕೃತಿ ಪ್ರಿಯರಾದ ಪೂಜ್ಯರ ಮಾರ್ಗದರ್ಶನದಲ್ಲಿ ನಾವು ಪ್ರಕೃತಿ ಸಂರಕ್ಷಿಸಿ ಉತ್ತಮ ಪರಿಸರವನ್ನು ಬೆಳೆಸೋಣ, ಉಡುಪಿ ಶ್ರೀಕೃಷ್ಣನ ಅನುಗ್ರಹವನ್ನು ನಾವೆಲ್ಲರೂ ಪಡೆಯುವಂತಾಗಲಿ ಎಂದು ಹಾರೈಸಿದರು.





