ಕುಂಬಳೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆಯು ತಮಿಳುನಾಡಿನ ಕಾಂಚಿಪುರಂನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಭಾವೈಕ್ಯ ಶಿಬಿರದಲ್ಲಿ ಕನ್ನಡ ನಿನಾದ ಅನುರಣಿಸುವ ವಿಶೇಷ ಸಂದರ್ಭ ಮೂಡಿಬಂದಿತು.
ಮಹರ್ಷಿ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಜನವರಿ 5ರಿಂದ 9ರ ತನಕ ನಡೆಯುವ ಶಿಬಿರದಲ್ಲಿ ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಪ್ರತಿನಿಧಿಸುವುದರ ಮೂಲಕ ಕಾಸರಗೋಡಿನ ಕನ್ನಡಿಗರಾದ ಸ್ಕೌಟುಗೈಡುಗಳು ಕೇರಳದ ವೈವಿಧ್ಯಮಯ ಸಂಸ್ಕತಿ, ಭಾಷೆ, ಆಹಾರ ಪದಾರ್ಥಗಳ ತಯಾರಿ, ಆಚಾರವಿಚಾರಗಳನ್ನು ಪ್ರದರ್ಶಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ಮತ್ತು ಗೈಡು ವಿಭಾಗದ ತರಬೇತಿ ಆಯುಕ್ತೆ ಆಶಾಲತಾ ಕೆ ಇವರ ನೇತೃತ್ವದಲ್ಲಿ ಕೂಡ್ಲು ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ಪಟ್ಲ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಎಂಟು ಮಂದಿ ಸ್ಕೌಟುಗಳು ಮತ್ತು ಗೈಡುಗಳು ಪ್ರಸ್ತುತ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.





