ಕಾಸರಗೋಡು: ಸಾರ್ವಜನಿ ರಸ್ತೆಗಳಲ್ಲಿ ಸಭೆ ಸಮಾರಂಭ ನಿಷೇಧಿಸುವಂತೆ ರಾಜ್ಯ ಹೈಕೋರ್ಟಿನ ಆದೇಶದನ್ವಯ ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಕಾಸರಗೋಡು ತಾಲೂಕು ಖಾಸಗಿ ಬಸ್ ಓಪರೇಟರ್ಸ್ ಅಸೋಸಿಯೇಶನ್ ಒತ್ತಾಯಿಸಿದೆ.
ಒಂದು ಹಂತದಲ್ಲಿ ಹೈಕೋರ್ಟು ಆದೇಶದನ್ವಯ ಕಾಸರಗೋಡು ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಪ್ರದೇಶದಲ್ಲಿ ಸಭೆ, ಸಮಾರಂಭ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೂ, ಮತ್ತೆ ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರನ್ನು ಒಟ್ಟುಸೇರಿಸಿ ಸಭೆ, ಸಮಾರಂಭ ಆಯೋಜಿಸಲಾಗುತ್ತಿದ್ದು, ಇದು ಬಸ್ ಪ್ರಯಾಣಿಕರಿಗೆ ಹಾಗೂ ನಿಲ್ದಾಣದೊಳಗೆ ತೆರಳುವ ಬಸ್‍ಗಳ ಚಾಲಕರಲ್ಲಿ ಭೀತಿಯ ವಾತಾವರಣ ಉಂಟುಮಾಡುತ್ತಿದೆ. ಪ್ರತಿ ಸಭೆ, ಪ್ರತಿಭಟನಾ ಮೆರವಣಿಗೆಗಳ ಸಮಾರೋಪಸಮಾರಂಬವನ್ನು ಹೊಸಬಸ್‍ನಿಲ್ದಾಣ ವಠಾರದಲ್ಲಿ ಆಯೋಜಿಸಲಾಗುತ್ತಿದ್ದು, ಈ ಸಂದರ್ಭ ಬಸ್‍ಗಳಿಗೆ ನಿಲ್ದಾಣದೊಳಗೆ ತೆರಳುವುದಾಗಲಿ, ಪ್ರಯಾಣಿಕರಿಗೆ ಬಸ್ಸನ್ನೇರುವುದಕ್ಕಾಗಲಿ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ಇದರಿಂದ ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸುವ ಮೂಲಕ ಹೈಕೋರ್ಟು ಆದೇಶ ಪಾಲನೆಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



