ಕಾಸರಗೋಡು: ಮಲಬಾರ್ ಪ್ರದೇಶದ ಬಲುದೊಡ್ಡ ಜಲನಿಧಿ ಯೋಜನೆ ಜಿಲ್ಲೆಯ ಈಸ್ಟ್ ಏಳೇರಿ ಗ್ರಾಮಪಂಚಾಯತ್ ನಲ್ಲಿ ಜಾರಿಗೊಳ್ಳಲಿದೆ. ಇಡೀ ಗ್ರಾಮ ಅನುಭವಿಸುತ್ತಿರುವ ನೀರಿನಬರಕ್ಕೆ ಶಾಶ್ವತ ಪರಿಹಾರ ಈ ಮೂಲಕ ಲಭಿಸಲಿದ್ದು, ಮೊದಲ ಹಂತದಲ್ಲಿ 2450 ಕುಟುಂಬಗಳಿಗೆ ಕುಡಿಯುವನೀರಿನ ಪೂರೈಕೆ ನಡೆಯಲಿದೆ.
ಈ ಯೋಜನೆ ಅನುಷ್ಠಾನದ ಪರಿಣಾಮ ಎಂಥಾ ಕಠಿನ ಬೇಸಗೆಯಲ್ಲೂ ಈಸ್ಟ್ ಏಳೇರಿ ಗ್ರಾಮಪಂಚಾಯತ್ ನಲ್ಲಿಕುಡಿಯುವ ನೀರಿನ ಬರ ತಲೆದೋರದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.
ಜಲನಿಧಿ ಯೋಜನೆಯ ನಿರ್ಮಾಣ ಕಾಮಗಾರಿ ಈಗ ಅಂತಿಮ ಹಂತದಲ್ಲಿದೆ. ಜಲಪ್ರಾಧಿಕಾರ ಮತ್ತು ರಾಜ್ಯ ಜಲನಿಧಿ ಯೋಜನೆ ಜಂಟಿ ವತಿಯಿಂದ ಈ ಯೋಜನೆ ಜಾರಿಗೊಳಿಸುತ್ತಿದೆ. ಇಲ್ಲಿನ ಪ್ರಧಾನ ಟಾಂಕಿಯಲ್ಲಿ 5 ಲಕ್ಷ ಲೀಟರ್ ನೀರು ತುಂಬಬಹುದಾಗಿದೆ. 25 ಕಿರು ಟಾಂಕಿಗಳೂ ಇದ್ದು, ಇವು 20 ಸಾವಿರ, 10 ಸಾವಿರ, 5 ಸಾವಿರ ಲೀಟರ್ ನೀರು ತುಂಬುವ ಸಾಮಥ್ರ್ಯ ಹೊಂದಿವೆ. ಇದಕ್ಕೆ ಬೇಕಾದ ತಲಾ ಮೂರು ಸೆಂಟ್ಸ್ ಜಾಗಗಳನ್ನು ಸಾರ್ವಜನಿಕರು ಉಚಿತವಾಗಿ ಒದಗಿಸಿದ್ದಾರೆ. ಗ್ರಾಮಪಂಚಾಯತ್ ಗಡಿಯಲ್ಲಿ ಹರಿಯುತ್ತಿರುವ ಕಾಯರ್ಂಗೋಡು ಹೊಳೆಯ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪಂಪ್ ಹೌಸ್ ನಿರ್ಮಿಸಲಾಗುತ್ತಿದೆ. ಇಲ್ಲಿ ಸಂಗ್ರಹಿಸಲಾಗುವ ನೀರನ್ನು ಒಂದು ಕಿಮೀ ದೂರದ ತವಳಕುಂಡ್ ಮಲೆಯಲ್ಲಿರುವ ಶುದ್ದೀಕರಣ ಘಟಕಕ್ಕೆ ರವಾನಿಸಿ ಅಲ್ಲಿ ಶುದ್ಧೀಕರಿಸಿ, ಗ್ರಾಮಪಂಚಾಯತ್ ನ ವಿವಿವಧೆಡೆಗೆ ಸರಬರಾಜು ನಡೆಸಲಾಗುವುದು. ಸರಬರಾಜಿಗಾಗಿ 350 ಕಿಮೀ ಉದ್ದದ ಪೈಪ್ ಲೈನ್ ಇಲ್ಲಿ ಸ್ಥಾಪಿಸಲಾಗಿದೆ. ಪ್ರಯೋಗ ದೃಷ್ಟಿಯಿಂದ ಈಗಾಗಲೇ ನೀರು ಸರಬರಾಜು ಆರಂಭಿಸಲಾಗಿದೆ. ಜನವರಿ ತಿಂಗಳಿಂದ ಪಂಚಾಯತ್ ನಲ್ಲೇ ಅತಿ ಎತ್ತರದ ಪ್ರದೇಶವಾಗಿರುವ ಮೀನಾಂಜೇರಿಗೆ ನೀರು ಸರಬರಾಜಾಗುತ್ತಿದೆ.
ಈ ಯೋಜನೆಯ ಪ್ರಧಾನ ಟಾಂಕಿ, 25 ಕಿರು ಟಾಂಕಿ, ಪೈಪ್ ಲೈನ್ ಇತ್ಯಾದಿಗಳಿಗಾಗಿ ರಾಜ್ಯ ಜಲನಿಧಿ ಯೋಜನೆ 13.36 ಕೋಟಿ ರೂ. ಜಲಪ್ರಾಧಿಕಾರ 12.12 ಕೋಟಿ ರೂ., ಈಸ್ಟ್ ಏಳೇರಿ ಗ್ರಾಮಪಂಚಾಯತ್ ಒಟ್ಟು ಮೊಬಲಗಿನ ಶೇ 15, ಫಲಾನುಭವಿಗಳ ಪಾಲು ರೂಪದಲ್ಲಿ ಶೇ 10 ಒದಗಿಸಿದೆ.
ಈಸ್ಟ್ ಏಳೇರಿ ಗ್ರಾಮಪಂಚಾಯತ್ ಯೋಜನೆಯ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದೆ. ನೌಕರರ ನೇಮಕಾತಿಯನ್ನೂ ಪಂಚಾಯತ್ ನಡೆಸಲಿದೆ. ತಿಂಗಳಿಗೆ ಎರಡೂವರೆ ಲಕ್ಷ ರೂ. ವಿದ್ಯುತ್ ಶುಲ್ಕ ಪಾವತಿಸಬೇಕಾದೀತು ಎಂದು ಅಂದಾಜಿಸಲಾಗಿದೆ. ಯೋಜನೆಯ ದ್ವತೀಯ ಹಂತದಲ್ಲಿ ಈಗ ಅರ್ಜಿ ಸಲ್ಲಿಸದೇ ಇದ್ದವರಿಗೆ ಸಲ್ಲಿಸುವ ಅವಕಾಶಗಳಿವೆ. ಯೋಜನೆ ಉಸ್ತುವಾರಿ ಸಂಬಂಧ ಸಮಿತಿಯೊಂದನ್ನು ರಚಿಸಲು ಪಂಚಾಯತ್ ಪದಾಧಿಕಾರಿಗಳು ಅಂದಾಜಿಸಿದ್ದು, ಉದ್ಘಾಟನೆಯ ನಂತರ ಈ ಸಮಿತಿ ಉಸ್ತುವಾರ ವಹಿಸಿಕೊಳ್ಳಲಿದೆ.
ಶೀಘ್ರದಲ್ಲೇ ಉದ್ಘಾಟನೆ:
2014ರಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಶೇ 99 ಕಾಮಗಾರಿ ಪೂರ್ಣವಾಗಲಿದೆ. ಶೀಘ್ರದಲ್ಲೇ ಯೋಜನೆಯ ಉದ್ಘಾಟನೆ ನಡೆಯಲಿದ್ದು, ತದನಂತರ 2450 ಕುಟುಂಬಗಳಿಗೆ ಕುಡಿಯುವ ನೀರು ವಿತರಣೆಗೊಳ್ಳಲಿದೆ. ಯೋಜನೆಯ ದ್ವಿತೀಯ ಹಂತದಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಮತ್ತು ಬಿ.ಪಿ.ಎಲ್. ಕುಟುಂಬಗಳಿಗೆ ಈ ನೀರಿನ ಸರಬರಾಜು ಪೂರ್ಣರೂಪದಲ್ಲಿ ಉಚಿತವಾಗಿರುವುದು ಎಂದು ಪಂಚಾಯತ್ ಸಮಿತಿ ತೀರ್ಮಾನಿಸಿದೆ.
ಜೇಸಿ ಟಾಂ, ಅಧ್ಯಕ್ಷ, ಈಸ್ಟ್ ಏಳೇರಿ ಗ್ರಾಮಪಂಚಾಯತ್.





