ಮುಳ್ಳೇರಿಯ: ಬೋವಿಕ್ಕಾನ ಸಮೀಪದ ಬೆಳ್ಳಿಪ್ಪಾಡಿಯ ಮಧುವಾಹಿನಿ ಗ್ರಂಥಾಲಯದ ನೇತೃತ್ವದಲ್ಲಿ ಇತ್ತೀಚೆಗೆ ಅಪಘಾತದಲ್ಲಿ ದುರ್ಮರಣಕ್ಕೊಳಗಾದ ಯಕ್ಷಗಾನ ಕಲಾವಿದ ಬಳ್ಳಮೂಲೆ ಈಶ್ವರ ಭಟ್ ಅವರ ಸಂಸ್ಮರಣೆ ಬುಧವಾರ ನಡೆಯಿತು.
ಗ್ರಂಥಾಲಯದ ಅಧ್ಯಕ್ಷ ಗೋವಿಂದ ಭಟ್ ಬಳ್ಳಮೂಲೆ ಅಧ್ಯಕ್ಷತೆ ವಹಿಸಿದ್ದ ಸಂಸ್ಮರಣಾ ಸಭೆಯನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಕಾಸರಗೋಡು ಉದ್ಘಾಟಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಎ.ಜಿ.ನಾಯರ್, ವಿ.ಬಾಲಕೃಷ್ಣನ್, ಟಿ.ಬಾಲಕೃಷ್ಣನ್, ಅಡ್ಕ ಸುಬ್ರಹ್ಮಣ್ಯ ಭಟ್, ರವೀಂದ್ರನ್ ಪಾಡಿ ಮೊದಲಾದವರು ದಿ.ಈಶ್ವರ ಭಟ್ ಅವರ ಬಗ್ಗೆ ನೆನಪುಗಳನ್ನು ಬಿಚ್ಚಿಟ್ಟು ಮಾತನಾಡಿ ಶ್ರದ್ದಾಂಜಲಿ ಅರ್ಪಿಸಿದರು.
ಜವಾಹರ್ ನೆಹರೂ ವಿದ್ಯಾಲಯದ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ ಲಕ್ನೋ ವಿಭಾಗಮಟ್ಟದ ಬಂಗಾರದ ಪದಕ ವಿಜೇತೆ ಅನುಶ್ರೀ ಚರವು ಅವರನ್ನು ಸಭೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಗ್ರಂಥಾಲಯದ ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಕೆ.ಜಯಚಂದ್ರನ್ ವಂದಿಸಿದರು.





