ಮುಳ್ಳೇರಿಯ : ಸಾಮಾಜಿಕವಾಗಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಬಟ್ಟೆ ಕೈಚೀಲಗಳಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗಲಿದೆ. ಆದ್ದರಿಂದ ಮನೆಯ ಮಹಿಳೆಯರು ಗೃಹೋದ್ಯಮವಾಗಿ ಬಟ್ಟೆ ಕೈಚೀಲಗಳನ್ನು ತಯಾರಿಸಬಹುದು. ಇದರಿಂದ ಉತ್ತಮ ಆದಾಯ ಗಳಿಸಬಹುದು ಎಂದು ಆಲಂತಡ್ಕದ ಲಕ್ಷ್ಮೀಶ ಕೇಕುಣ್ಣಾಯ ಹೇಳಿದರು.
ಅವರು ಕುಂಟಾರು ಗೋಪಾಲಕೃಷ್ಣ ಭಟ್ ಮನೆಯಲ್ಲಿ ಭಾನುವಾರ ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯಲ್ಲಿ 'ಮಹಿಳೆಯರಿಗೆ ಬಟ್ಟೆ ಕೈಚೀಲ ತಯಾರಿ" ಹಾಗೂ ಮಾರುಕಟ್ಟೆಯ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಮಹಿಳೆಯರು ಬಟ್ಟೆ ಕೈಚೀಲಗಳಲ್ಲಿ ಕಸೂತಿ ಚಿತ್ರಗಳನ್ನೂ ಕೂಡಾ ರಚಿಸಬಹುದು. ಅಲಂಕಾರಿಕ ಚೀಲಗಳನ್ನೂ ರಚಿಸಬಹುದು. ಈ ಚೀಲಗಳಲ್ಲಿ ಯಾವುದೇ ರೀತಿಯ ಪೈಂಟಿಂಗ್ ಮುದ್ರಣಗಳು ಇರಬಾರದು. ಖಾದಿ ಬಟ್ಟೆ, ಪೋಲಿಸ್ಟರ್, ಬೆಡ್‍ಶೀಟ್, ಮಡಿ ವಸ್ತ್ರ ಹಾಗೂ ಬೈಂಡ್ ಪೇಪರ್‍ಗಳನ್ನು ಬಳಸಬಹುದು. ವಿವಿಧ ಗಾತ್ರದಲ್ಲೂ ಬಟ್ಟೆ ಕೈಚೀಲಗಳನ್ನು ತಯಾರಿಸಬಹುದು. ಪ್ರತೀ ಮನೆಯ ಮಹಿಳೆಯರೂ ಕೂಡಾ ಬಿಡುವಿನ ವೇಳೆಯಲ್ಲಿ ಕೈಚೀಲಗಳನ್ನು ತಯಾರಿಸಿ ಸಮುದಾಯದ ಮಾಸಿಕ ಸಭೆಗೆ ಒಪ್ಪಿಸಿದರೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿ ಕೊಡಲಾಗುವುದು ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಿವಳ್ಳಿ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎಂ ಶ್ರೀಪತಿ ಕಡಂಬಳಿತ್ತಾಯ ವಹಿಸಿದ್ದರು. ಸಭೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ ಉಪಸ್ಥಿತರಿದ್ದರು. ಸಭೆಯಲ್ಲಿ ಕೃಷ್ಣ ಸರಳಾಯ ಕಾಯರ್ತಿಮಾರು, ಶ್ರೀಪ್ರಸಾದ ಎ, ಅನಂತರಾಮ ಎಂ, ಗುರುಪ್ರಸಾದ್ ಹೆಬ್ಬಾರ್, ಪದ್ಮನಾಭ ಭಟ್, ಅನಿಲ್ ಕುಮಾರ್ ಸರಳಾಯ, ಅನನೂಯ ಕೆ, ನಳಿನಾಕ್ಷಿ ಸರಳಾಯ, ಸಜಿತಾ ಪಿ ಭಟ್, ಸಾವಿತ್ರಿ ವಿ, ಆಕರ್ಷ ಭಟ್, ಯು ಸುಬ್ರಹ್ಮಣ್ಯ ಮೊದಲಾದವರು ಭಾಗವಹಿಸಿದ್ದರು. ಪ್ರಶಾಂತ ರಾಜ ವಿ ತಂತ್ರಿ ಸ್ವಾಗತಿಸಿ, ವಂದಿಸಿದರು.




