ಬದಿಯಡ್ಕ: ನಾನಾಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅನೇಕ ಪ್ರತಿಭಾನ್ವಿತರನ್ನು ನಾಡಿಗೆ ನೀಡಿದ ಮಾನ್ಯವೆಂಬ ಮಹಾವೃಕ್ಷದ ತಾಯಿಬೇರು ಗಿರಿಜಾಬಾಯಿ ಟೀಚರ್. ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಅನೇಕ ಮಂದಿಗೆ ಅವರು ಗುರುವಾಗಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ಸಂಬೋಧಿಸುವ ಅವರು ಜಗತ್ತಿಗೇ ಆದರ್ಶಪ್ರಾಯರಾದ ಮಹಿಳೆ ಎನ್ನುವುದರಲ್ಲಿ ಸಂದೇಹವಿಲ್ಲ. ಮಾನ್ಯದ ಮಕ್ಕಳಿಗೆ ಅವರು ಅಮ್ಮನಾಗಿದ್ದಾರೆ. ಎಂದು ನಿವೃತ್ತ ಶಿಕ್ಷಕ ನಾರಾಯಣ ಮಾಸ್ತರ್ ಚರ್ಲಡ್ಕ ಸಂತಾಪ ವ್ಯಕ್ತಪಡಿಸಿದರು.
ಗುರುವಾರ ರಾತ್ರಿ ನಿಧನರಾದ ಮಾನ್ಯ ಜ್ಞಾನೋದಯ ಶಾಲಾ ನಿವೃತ್ತ ಅಧ್ಯಾಪಿಕೆ ಗಿರಿಜಾ ಬಾಯಿಯವರಿಗೆ ಸಂತಾಪ ಸೂಚಿಸಿ ಮಾನ್ಯ ಜ್ಞಾನೋದಯ ಶಾಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಪಂ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮೇಗಿನಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಟಿ.ಗೋವಿಂದನ್ ನಂಬೂದಿರಿ ಮಾತನಾಡಿ 1959ರಿಂದ 1991ರ ಕಾಲಘಟ್ಟದಲ್ಲಿ 32 ವರ್ಷಗಳ ಕಾಲ ಅಧ್ಯಾಪನ ವೃತ್ತಿಯನ್ನು ನಿರ್ವಹಿಸಿ ಊರಿನತಾಯಿಯಾಗಿದ್ದರು ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಎಂ.ಜುಬೈರ್ ಮಾತನಾಡಿ ಅವರ ವಿಯೋಗದ ದಿನ ನಾಡಿನ ಜನರ ದುಃಖವು ಕಟ್ಟೆಯೊಡೆದಿರುವುದನ್ನು ಗಮನಿಸಿದರೆ ಸಾಕು ಅವರು ಊರಿಗೆ ಏನಾಗಿದ್ದರು ಎಂಬುದು ನಮಗೆ ತಿಳಿಯುತ್ತದೆ. ವಿದ್ಯಾಭ್ಯಾಸ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಅವರು ಮಾನ್ಯವನ್ನು ಮಾನ್ಯತೆಯತ್ತ ಕೊಂಡೊಯ್ಯುವಲ್ಲಿ ಕಾರಣರಾಗಿದ್ದಾರೆ ಎಂದರು. ಮಾಜಿ ಗ್ರಾಪಂ ಸದಸ್ಯ ಮಂಜುನಾಥ ಡಿ. ಮಾನ್ಯ ಮಾತನಾಡಿ ಹುಟ್ಟುವಾಗ ಉಸಿರು ಇರುತ್ತದೆ, ಉಸಿರು ನಿಂತಾಗ ಹೆಸರು ಇರುತ್ತದೆ ಎನ್ನುವುದಕ್ಕೆ ಇವರೇ ಉದಾಹರಣೆಯಾಗಿದ್ದಾರೆ. ಅವರ ಜೀವನಶೈಲಿ, ಬದುಕು ನಮಗೆ ದಾರಿದೀಪವಾಗಿದೆ ಎಂದರು. ಶಾಲಾ ವ್ಯವಸ್ಥಾಪಕ ನಿತ್ಯಾನಂದ ಮಾನ್ಯ, ರವಿಶಂಕರ ಎಂ.ವಿ., ರಾಧಾಕೃಷ್ಣ ರೈ, ದಯಾನಂದ ರಾವ್, ಸುಂದರ ಶೆಟ್ಟಿ ಕೊಲ್ಲಂಗಾನ, ಜ್ಞಾನೋದಯ ಶಾಲೆ ಮಾನ್ಯ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಾದ ಸಾಮ್ರಾಟ್ ಮಾನ್ಯ, ಶ್ರೀ ಅಯ್ಯಪ್ಪ ಸೇವಾಸಂಘ ಮಾನ್ಯ, ಪ್ರಿಯದರ್ಶಿನಿ ಸ್ಪೋಟ್ಸ್ ಕ್ಲಬ್, ಫ್ರೆಂಡ್ಸ್ ಮಾನ್ಯ, ಮೂಕಾಂಬಿಕಾ ಮುಂಡೋಡು, ಬ್ರದರ್ಸ್ ಮಾನ್ಯ, ಮಂಜುಶ್ರೀ ಮಾನ್ಸದ ಪದಾಧಿಕಾರಿಗಳು ಹಾಗೂ ಸದಸ್ಯರು ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿಧನರಾದ ಗಿರಿಜಾ ಬಾಯಿ ಟೀಚರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು.




