ಉಪ್ಪಳ: ತ್ರಿಶೂರಿನ ಸರಸ್ವತೀ ವಿದ್ಯಾನಿಕೇತನ ಸೆಂಟ್ರಲ್ ಸ್ಕೂಲ್ ನಲ್ಲಿ ಡಿ. 27 ರಿಂದ 29 ರ ತನಕ ನಡೆದ ಭಾರತೀಯ ವಿದ್ಯಾನಿಕೇತನದ ಕೇರಳ ರಾಜ್ಯಮಟ್ಟದ ಕಲೋತ್ಸವದಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 6 ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧೀಕರಿಸಿ ಸ್ಪರ್ಧಿಸಿದ್ದು ಬಹುಮಾನಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.
ವಿದ್ಯಾಪೀಠದ 9ನೇ ತರಗತಿಯ ವಿದ್ಯಾರ್ಥಿ ಪ್ರದ್ಯೋತ್ ಎನ್ ಕಿಶೋರ ವಿಭಾಗದ ಭರತನಾಟ್ಯ ಹಾಗೂ ಜಾನಪದ ನೃತ್ಯದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮಸ್ಥಾನವನ್ನೂ, 10ನೇ ತರಗತಿಯ ವಿದ್ಯಾರ್ಥಿನಿ ಕು. ಗಾಯತ್ರೀ ಕೆ. ಕಿಶೋರ ವಿಭಾಗದ ವಯಲಿನ್ ವಾದನದಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯಸ್ಥಾನವನ್ನೂ, 10ನೇ ತರಗತಿಯ ವಿದ್ಯಾರ್ಥಿನಿ ಕು. ಶಮಾ ಆರ್ ಶೆಟ್ಟಿ ಕಿಶೋರವಿಭಾಗದ ಕೂಚುಪುಡಿನೃತ್ಯದಲ್ಲಿ ಬಿ ಗ್ರೇಡ್ ನೊಂದಿಗೆ ತೃತೀಯಸ್ಥಾನವನ್ನೂ, 8ನೇ ತರಗತಿಯ ವಿದ್ಯಾರ್ಥಿನಿ ಕು. ಪ್ರೀತಿ ಬಾಲವಿಭಾಗದ ಸಂಸ್ಕೃತಭಾಷಣದಲ್ಲಿ ಎ ಗ್ರೇಡ್ ನೊಂದಿಗೆ ತೃತೀಯಸ್ಥಾನವನ್ನೂ ಪಡೆದಿರುತ್ತಾರೆ. ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಈ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿಯವರು ಹರಸಿ ಅಭಿನಂದಿಸಿದ್ದಾರೆ.





