ಮಂಜೇಶ್ವರ: ಮಂಜೇಶ್ವರ ತಾಲೂಕಿನಲ್ಲಿ ರೀಸರ್ವೇ ಸಂಬಂಧ ಕ್ರಮ ಇನ್ನೂ ಪೂರ್ಣಗೊಳ್ಳದೇ ಇರುವ ಕಾರಣ ಸರ್ವೇ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಎಂಬ ತೀರ್ಮಾನವನ್ನು ಪುರ್ ಪರಿಶೀಲನೆ ನಡೆಸಬೇಕು ಎಂದು ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಟ್ಟದಲ್ಲಿ ಕೆಲವು ಗ್ರಾಮಗಳ ರೀಸರ್ವೇ ನಡೆಸಿರುವಲ್ಲಿ ಕೆಲವು ಲೋಪದೋಷಗಳು ಇರುವ ಹಿನೆಲೆಯಲ್ಲಿ ಅವುಗಳ ತಿದ್ದುಪಡಿ ನಡೆಸದೇ ಮತ್ತು ಈ ಕಾರಣದಿಂದ ತೆರಿಗೆ ಪಾವತಿದೇ ಇರುವ ಕಾರಣ ಪರಿಹಾರ ಇನ್ನೂ ವಿಳಂಬವಾಗುವ ಭೀತಿಯಿದೆ ಎಂದು ಸಭೆ ಕಳಕಳಿ ವ್ಯಕ್ತಪಡಿಸಿದೆ. ಈ ಪರಿಸ್ಥಿತಿಯಲ್ಲಿ ಸರ್ವೇಯರ್, ಹೆಡ್ ಸರ್ವೇಯರ್ ಸಹಿತ 11 ಮಂದಿಯಲ್ಲಿ 9 ಮಂದಿಯನ್ನು ಈಗಾಗಲೇ ಹಿಂದಕ್ಕೆ ಕರೆಸಿಕೊಳ್ಳಲಾಗಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದರು.
ತಾಲೂಕಿನ ಪ್ರಧಾನ ಕೃಷಿಯಾಗಿರುವ ಅಡಕೆಗೆ ಮಹಾಳಿ ಮತ್ತು ಹಳದಿ ರೋಗ ಬಾಧೆ ನೀಡುತ್ತಿದ್ದು, ಕೃಷಿಕರು ಕಂಗೆಟ್ಟಿದ್ದಾರೆ. ತಕ್ಷಣ ಪರಿಹಾರ ಒದಗಿಸಬೇಕು, ಹೊಸ ಸಸಿಗಳನ್ನು ವಿತರಿಸಬೇಕು, ಕೃಷಿ ವೆಚ್ಚವನ್ನು ಸರ್ಕಾರವೇ ವಹಿಸಬೇಕು, ಬ್ಯಾಂಕ್ ಸಾಲಗಳಿಗೆ ಮೋರಟೋರಿಯಂ ಘೋಷಿಸಬೇಕು, ಬಡ್ಡಿಯಲ್ಲಿ ರಿಯಾಯಿತಿ ನೀಡಬೇಕು ಎಂಬ ಸಭೆ ಆಗ್ರಹಿಸಿದೆ.
ಎಣ್ಮಕಜೆ ಗ್ರಾಮದ ಶಾಂತಿಪದವು ಎಂಬಲ್ಲಿ ಸ್ಥಳೀಯರ ಯಾತ್ರಾ ಸೌಕರ್ಯ ನಿಷೇಧಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಈ ಪ್ರದೇಶವನ್ನು ಸಂದರ್ಶಿಸಲು ಸಭೆ ನಿರ್ಧರಿಸಿದೆ. ಉಪ್ಪಳದಲ್ಲಿ ಪೆÇಲೀಸ್ ಠಾಣೆ ಸ್ಥಾಪಿಸುವುದು ಅನಿವಾರ್ಯ ಎಂದು ಸಭೆ ಆಗ್ರಹಿಸಿದೆ. ಮಂಗಲ್ಪಾಡಿ, ಉಪ್ಪಳ ಸಹಿತ ವಲಯಗಳಲ್ಲಿ ಸಾಮಾಜಿಕ ದ್ರೋಹಿಗಳು ಅಕ್ರಮ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಪ್ಪಳದಲ್ಲಿ ಪೆÇಲೀಸ್ ಠಾಣೆ ಅಗತ್ಯ. ಉಪ್ಪಳ ಗ್ರಾಮದ ಐಲ ಮೈದಾನದಲ್ಲಿ ಕಿರು ಸಿವಿಲ್ ಸ್ಟೇಟೇಷನ್ ಮತ್ತು ಪೆÇಲೀಸ್ ಠಾಣೆ ನಿರ್ಮಾಣ ಕ್ರಮ ತ್ವರಿತಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ ಸಭೆಯಲ್ಲಿ ಉತ್ತರಿಸಿದರು.
ವರ್ಕಾಡಿಯಲ್ಲಿ ಸರ್ಕಾರಿ ಶಾಲೆ ಬೇಕು ಎಂದು ಸಭೆ ಬಯಕೆ ವ್ಯಕ್ತಪಡಿಸಿದೆ. ವಲಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಮದ ಇದು ಅನಿವಾರ್ಯ. ಪಾವೂರು ಗ್ರಾಮದ ಮೂರು ಎಕ್ರೆ ಜಾಗದಲ್ಲಿ ಕನ್ನಡ-ಮಲೆಯಾಳಂ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಶೀಘ್ರದಲ್ಲೇ ನಿರ್ಮಿಸಲು ಸಹಾಯಕ ಶಿಕ್ಷಣಾಧಿಕಾರಿಗೆ ಮನವಿಸಲ್ಲಿಸಿರುವುದಾಗಿ ಗ್ರಾಮಪಂಚಾಯತ್ ಅಧ್ಯಕ್ಷ ಸಭೆಯಲ್ಲಿ ತಿಳಿಸಿದರು. ಕುಂಬಳೆ ರೈಲು ನಿಲ್ದಾಣದ ಮುಂಭಾಗಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲುಗಡೆ ಮಂಜೂರು ಮಾಡಬೇಕು ಎಂದು ಸಭೆ ಆಗ್ರಹಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಪತ್ರ ರವಾನಿಸಲಾಗಿದೆ ಎಂದು ವಲಯ ಕಂದಾಯಾಧಿಕಾರಿ ಅವರ ಪ್ರತಿನಿಧಿ ಸಭೆಯಲ್ಲಿ ಹೇಳಿದರು.
ತಹಸೀಲ್ದಾರ್ ಪಿ.ಜೆ.ಆಂಟೋ, ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಮಂಗಲ್ಪಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್, ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್, ವಿವಿಧ ಇಲಾಖೆ ಸಿಬ್ಬಂದಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಪಿ.ಮುನೀರ್, ಜೆ.ಎಸ್.ಸೋಮಶೇಖರ, ರಾಘವ ಚೇರಾಲ್, ಎಸ್.ಎಂ.ತಂಙಳ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಾಂಶ:
ಕನ್ನಡದಲ್ಲಿ ಪಡಿತರ ಚೀಟಿಯಲ್ಲಿ ದಾಖಲಾತಿ ಬೇಕು:
ಪಡಿತರ ಚೀಟಿಯಲ್ಲಿ ಕನ್ನಡದಲ್ಲಿ ಹೆಸರು ದಾಖಲಾತಿ ನಡೆಸಲು ವ್ಯವಸ್ಥೆ ಏರ್ಪಡಿಸಬೇಕು ಎಂದು ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ. ಕನ್ನಡ ಬಲ್ಲ ಡಾಟಾ ಎಂಟ್ರಿ ಆಪರೇಟರನ್ನೇ ಈ ನಿಟ್ಟಿನಲ್ಲಿ ನೇಮಿಸಬೇಕು ಎಂದು ಸಭೆ ಒಕ್ಕೊರಲಿನಿಂದ ಆಗ್ರಹಿಸಿದೆ.




