ಮಧೂರು: ಕಲ್ಮಾಡಿ ತೋಡಿನ ಪುನಶ್ಚೇತನ ಶೀಘ್ರದಲ್ಲಿ ನಡೆಯಲಿದೆ. 15 ಕಿಮೀ ಉದ್ದವಿರುವ ಈ ತೋಡು ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತಿ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಹರಿಯುತ್ತಿದೆ. ಹರಿತ ಕೇರಳಂ ಮಿಷನ್ ನ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್,ಕಿರು ನೀರಾವರಿ ಇಲಾಖೆ, ಮಹಾತ್ಮಾ ಗಾಂಧಿ ಗ್ರಾಮೀಣ ನೌಕರಿ ಖಾತರಿ ಯೋಜನೆ, ಮಣ್ಣು ಸಂರಕ್ಷಣೆ ಇಲಾಖೆ, ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತಿಗಳ ಜಂಟಿ ವತಿಯಿಂದ ಈ ಪುನಶ್ಚೇತನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ತೋಡಿನಲ್ಲಿರುವ ತ್ಯಾಜ್ಯ ತೆರವುಗೊಳಿಸಿ, ಜೈವಿಕ ರೀತಿಯಲ್ಲಿ ಬದಿಗಳನ್ನು ಸಂರಕ್ಷಿಸುವ, ತೆಂಗಿನನಾರಿನ ಭೂಹಾಸು ಸ್ಥಾಪಿಸಲಾಗುವುದು. ತೋಡಿನ ನೀರಿನ ಪಾತ್ರೆಯಲ್ಲಿ ತುಂಬಿಕೊಂಡಿರುವ ಹೆಚ್ಚುವರಿ ಮಣ್ಣನ್ನು ತೆರವುಗೊಳಿಸಿ ಪುನಶ್ಚೇತನ ಕಾಯಕ ನಡೆಸಲಾಗುವುದು. ತೋಡಿಗೆ ತ್ಯಾಜ್ಯ ಬಿಸುಟದಂತೆ ಎಚ್ಚರಿಕೆ ನೀಡಲಾಗುವುದು. ಸ್ಥಳೀಯ ಆಸ್ಪತ್ರೆ, ಹೋಟೆಲ್ ಮುಂತಾದೆಡೆ ತ್ಯಾಜ್ಯ ಸಂಸ್ಕರಣೆಗೆ ಅಲ್ಲಲ್ಲೇ ವ್ಯವಸ್ಥೆ ನಡೆಸುವತೆ ಕಡ್ಡಾಯಗೊಳಿಸಲಾಗುವುದು. ಜೊತೆಗೆ ತೋಡಿನ ಸಂರಕ್ಷಣೆಗೆ ಜಲಪರ ಒಕ್ಕೂಟ ರಚಿಸಿ ಚಟುವಟಿಕೆ ನಡೆಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿರುವರು.
ಈ ಸಂಬಂಧ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್, ಸ್ಥಾಯೀ ಸಮಿತಿ ಅಧ್ಯಕ್ಷರು, ವಾರ್ಡ್ ಸದಸ್ಯರು, ಕಿರು ನೀರಾವರಿ, ಮಣ್ಣು ಸಂರಕ್ಷಣೆ ಇಲಾಖೆಗಳ ಸಿಬ್ಬಂದಿ, ಮಹಾತ್ಮಾ ಗಾಂಧಿ ನೌಕರಿಖಾತರಿ ಯೋಜನ ಕಾರ್ಮಿಕರು ಮೊದಲಾದವರು ಉಪಸ್ಥಿತರಿದ್ದರು. ಹರಿತ ಕೇರಳಂಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ಸ್ವಾಗತಿಸಿದರು. ನಗರಸಭೆ ಕಾರ್ಯದರ್ಶಿ ಬಿಜು ಯು. ವಂದಿಸಿದರು.




