ಕಾಸರಗೋಡು: ಬೇಕಲ ಉಪಜಿಲ್ಲಾ ಬೇಕಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕನ್ನಡ ಮಾಧ್ಯಮಕ್ಕೆ ಕನ್ನಡ ಅರಿಯದ ಶಿಕ್ಷಕಿಯನ್ನು ನೇಮಿಸಲಾಗಿದ್ದು, ಈ ಬಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಪ್ರತಿಭಟನೆ ನಡೆಸಿದರು. ಕನ್ನಡ ಬಾರದ ಶಿಕ್ಷಕಿಯನ್ನು ವಾಪಾಸುಕರೆಸಿಕೊಲ್ಳುವಂತೆ ಎಬಿವಿಪಿ ನೇತೃತ್ವದಲ್ಲಿಯೂ ಪ್ರತಿಭಟನೆ ನಡೆಯಿತು.
ಪಿಎಸ್‍ಸಿ ಮೂಲಕ ನೇಮಕಾತಿ ಪಡೆದಿರುವ ಶಿಕ್ಷಕಿಯನ್ನು ಪೊಲೀಸರ ರಕ್ಷಣೆಯೊಂದಿಗೆ ಶಾಲೆಗೆ ಕರೆತರಲಾಗಿತ್ತು. ಇದನ್ನು ಮನಗಂಡ ಶಾಲಾ ವಿದ್ಯಾರ್ಥಿಗಳ ಹೆತ್ತವರು ಶಾಲೆಗೆ ಆಗಮಿಸಿ ಪ್ರತಿಭಟಿಸಿದರು. ಕನ್ನಡ ಮಾಧ್ಯಮಕ್ಕೆ ಕನ್ನಡ ಬಾರದ ಶಿಕ್ಷಕಿಯ ನೇಮಕಾತಿ ವಿರುದ್ಧ ಪ್ರತಿಭಟನೆ ಸಲ್ಲಿಸಿದ ಇವರು, ಶಿಕ್ಷಕಿಯನ್ನು ತಕ್ಷಣ ಹಿಂದಕ್ಕೆ ಕರೆಸುವಂತೆ ಆಗ್ರಹಿಸಿದರು. ಕನ್ನಡ ಬಾರದ ಶಿಕ್ಷಕಿಗೆ ತರಗತಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿ ಪ್ರತಿಭಟಿಸಿದರು. ಶಾಲೆಗೆ ಆಗಮಿಸಿದ ಶಿಕ್ಷಕಿಯನ್ನು ಮುಖ್ಯದ್ವಾರದಲ್ಲಿ ವಿದ್ಯಾರ್ಥಿಗಳು ತಡೆದಿದ್ದು, ಶಿಕ್ಷಕಿಯನ್ನು ಕಚೇರಿಗೆ ತೆರಳಲು ಅವಕಾಶ ನೀಡುವಂತೆ ತಿಳಿಸಿದ್ದರು. ಇದಕ್ಕೆ ವಿದ್ಯಾರ್ಥಿಗಳು ತಯಾರಾಗದಿದ್ದಾಗ ಬೇಕಲ ಠಾಣೆ ಎಸ್.ಐ ನೇತೃತ್ವದ ಪೊಲೀಸರ ಸಹಾಯದೊಂದಿಗೆ ಶಿಕ್ಷಕಿಯನ್ನು ಕಚೇರಿಯೊಳಗೆ ಕರೆದೊಯ್ದಿದ್ದಾರೆ. ಮಾಹಿತಿ ಪಡೆದು ವಿದ್ಯಾರ್ಥಿಗಳ ಹೆತ್ತವರು ಹಾಗೂ ಕನ್ನಡಾಭಿಮಾನಿಗಳು ಶಾಲೆಗೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಕನ್ನಡ ಬಾರದ ಶಿಕ್ಷಕಿ ತರಗತಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿರುವ ವಿದ್ಯಾರ್ಥಿಗಳು, ತರಗತಿ ಬಹಿಷ್ಕರಿಸುವುದಾಗಿಯೂ ತಿಳಿಸಿದ್ದಾರೆ.

