ಕಾಸರಗೋಡು: ಕ್ಯಾನ್ಸರ್ ರೋಗದ ಕೋಶಗಳನ್ನು ನಾಶಪಡಿಸುವ ಪ್ರಾಜೆಕ್ಟ್ ಸಹಿತ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ಬೆಂಗಳೂರಿನಲ್ಲಿ ನಡೆಯುವ ಐರಿಸ್ ವಿಜ್ಞಾನ ಮೇಳಕ್ಕೆ ತೆರಳುತ್ತಿದ್ದಾರೆ. ಕೊಳತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್ಯಾ ರವೀಂದ್ರನ್ ಈ ರೀತಿ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸುವರು.
ಈಗಿರುವ ಆಧುನಿಕ ರೀತ್ಯಾ ಕ್ಯಾನ್ಸರ್ ಚಿಕಿತ್ಸೆ ದುಬಾರಿ ಮತ್ತು ಅಡ್ಡಪರಿಣಾಮ ಹೊಂದಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ಲಭಿಸುವ ಹಳದಿ ಗೆಡ್ಡಯಿಂದ ಕೂರ್ಕುಮಿನ್ ಬೇರ್ಪಡಿಸಿ ಅದನ್ನು ಔಷಧಿಯಾಗಿಸಿ ಸೇವಿಸಿದರೆ ಅದು ಕ್ಯಾನ್ಸರ್ ಗೆ ರಾಮಬಾಣವಾಗಲಿದೆ ಎಂದು ಇವರ ಪ್ರಾಜೆಕ್ಟ್ ನಲ್ಲಿ ವೈಜ್ಞಾನಿಕ ರೀತಿ ವಿವರಿಸಲಾಗಿದೆ. ಕ್ಯಾನ್ಸರ್ ರೋಗ ಚಿಕಿತ್ಸಾ ರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸುವ ಸಾಧ್ಯತೆಯಿರುವ ಈ ಪ್ರಾಜೆಕ್ಟನ್ನು ಆರ್ಯಾ ತಮ್ಮ ಸಹೋದರ, ಕೋಯಿಕೋಡ್ ವೈದ್ಯಕೀಯ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಆಶ್ರಯ್ ಅವರ ಮೇಲ್ನೋಟದಲ್ಲಿ ಸಿದ್ಧಪಡಿಸಿದ್ದಾರೆ.
ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಇಲಾಖೆ, ಭಾರತ-ಯು.ಎಸ್. ತಂತ್ರಜ್ಞಾನ ಸಹಕಾರ ಘಟಕವಾಗಿರುವ "ಇಂಟೆಲ್" ಜಂಟಿಯಾಗಿ ಜ.22ರಿಂದ 24 ವರೆಗೆ ಬೆಂಗಳೂರಿನಲ್ಲಿ ವಿಜ್ಞಾನ ಮೇಳವನ್ನು ನಡೆಸುತ್ತಿದೆ. ಮಾಲಿಕ್ಯೂಲರ್ ಬಯಾಲಜಿಯಲ್ಲಿ ರಾಜ್ಯದಿಂದ ಆಯ್ಕೆಗೊಂಡ ಏಕೈಕ ಪ್ರಾಜೆಕ್ಟ್ ಆರ್ಯಾ ಅವರದ್ದು. ಇವರು ಕೊಳತ್ತೂರು ನಿವಾಸಿ ದೀಪಾ-ದಿ.ರವೀಂದ್ರನ್ ಅವರ ಪುತ್ರಿಯಾಗಿದ್ದಾರೆ.


