ಕುಂಬಳೆ: ಕಾಸರಗೋಡಿನ ಪಿಲಿಕುಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ರೂವಾರಿ ಕೆ.ವಿ.ರಮೇಶ್ ಅವರಿಂದ ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಕ್ಕಳಿಗಾಗಿ ಬೊಂಬೆಯಾಟ ಪ್ರದರ್ಶನ-ಪ್ರಾತ್ಯಕ್ಷಿಕೆ ಗುರುವಾರ ನೆರವೇರಿತು. ದೇಶ-ವಿದೇಶಗಳಲ್ಲೂ ಬೊಂಬೆಯಾಟ ಕಾರ್ಯಕ್ರಮ ನಡೆಸಿ ಸೈ ಎನಿಸಿಕೊಂಡ ಕಾಸರಗೋಡಿನ ಪಿಲಿಕುಂಜೆಯಲ್ಲಿರುವ ಯಕ್ಷ ಪುತ್ಥಳಿ ಬೊಂಬೆಮನೆಯ ಕೆ.ವಿ.ರಮೇಶರ ಬಳಗ ನರಕಾಸುರ ವಧೆ ಎಂಬ ಕಥಾಭಾಗವನ್ನು ಪ್ರದರ್ಶಿಸಿ, ಮಕ್ಕಳಿಗೆ ಬೊಂಬೆಯಾಡಿಸುವ ಕೈಚಳಕದ ಬಗ್ಗೆ ಮಾಹಿತಿ ನೀಡಿದರು.
ಬೊಂಬೆಯಾಟಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ದೀಪಬೆಳಗಿ ಮಾತನಾಡಿ, ಯಕ್ಷಗಾನ ಕಲೆ ಉಳಿದರೆ ನಮ್ಮ ಸಂಸ್ಕøತಿ,ಧರ್ಮ ಉಳಿಯುತ್ತದೆ. ಅದು ಉಳಿಯಬೇಕಿದ್ದರೆ ಶಾಲಾ ಮಕ್ಕಳಿಗೆ ಅರಿವಿನ ಜಾಗೃತಿ ಆಸಕ್ತಿದಾಯಕವಾಗಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅಭಿನಂದನೀಯ ಎಂದರು.
ಚಿತ್ರಕಲಾ ಅಧ್ಯಾಪಕ ಶಿವಾನಂದ ಅವರು ಯಕ್ಷಗಾನದ ಹಿನ್ನೆಲೆಯ ಪ್ರಾರ್ಥನೆ ಹಾಡಿದರು. ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್.ಮುನ್ನಿಪ್ಪಾಡಿ, ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಮೊದಲಾದವರು ಉಪಸ್ಥಿತರಿದ್ದರು.





