HEALTH TIPS

ಸಾಹಿತ್ಯ - ಪಾಂಡಿತ್ಯ - ಸಂಶೋಧನೆ-ಎಂದರೆ ಅದರೊಳಗೊಂದು ಮನುಷ್ಯತ್ವವೂ ಇರಬೇಕು-ಅಸ್ತಂಗತರಾದ ಚಿ.ಮೂ.ನೆನಪಿಸಿ ಅಕ್ಷರಾಂಜಲಿ-ಬರಹ-ಡಾ.ರತ್ನಾಕರ ಮಲ್ಲಮೂಲೆ

       
      (ಇಂದು ಮುಂಜಾನೆ ಅಸ್ತಂಗತರಾದ ಕನ್ನಡದ ಹಿರಿಯ ಹೋರಾಟಗಾರ, ಪ್ರಾಧ್ಯಾಪಕ, ಇತಿಹಾಸದ ಋಜು ಮಾರ್ಗ ಸಂಶೋಧಕ ಡಾ.ಚಿದಾನಂದಮೂರ್ತಿಗಳ ಬಗ್ಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರ ಅಕ್ಷರಾಂಜಲಿ)
             ಕೆಲವು ದಿನಗಳ ಮೊದಲು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರ ಹೆಸರಿಗೆ ಒಂದು ಪತ್ರ ಬಂದಿತ್ತು. ಅದು ಚಿದಾನಂದ ಮೂರ್ತಿಯವರದ್ದು.
       ಕಾಸರಗೋಡಿನಲ್ಲಿರುವ ಸ್ವರ್ಗ, ದೇವಲೋಕ, ಮತ್ರ್ಯ - ಈ ಸ್ಥಳನಾಮಗಳು ಹೆಚ್ಚಿನ ವಿವರ, ಭೌಗೋಳಿಕ ಚಹರೆ ಮತ್ತು ಸಾಂಸ್ಕøತಿಕ ಆಯಾಮಗಳ ಕುರಿತು ಮಾಹಿತಿ ಕೇಳಿದ್ರು. ಅದನ್ನು  ಒದಗಿಸುವ ಬಗ್ಗೆ ನಾನು ಮತ್ತು ಶ್ರೀಮತಿ ಸುಜಾತ ಮೇಡಂ ಪ್ರಯತ್ನಿಸುತ್ತಿದ್ದೆವು.ಆದರೆ ಅದು ಚಿದಾನಂದ ಮೂರ್ತಿಯವರ ಕರಗಳಿಗೆ ತಲುಪುವ ಮೊದಲೇ ಮೂರ್ತಿಯವರು ನಮ್ಮನ್ನೇ ಬಿಟ್ಟು ಹೋದರು.
*****
        ಅಧ್ಯಾಪನ, ಸಂಶೋಧನೆ, ಸೃಜನಾತ್ಮಕ ಬರಹ ಇವುಗಳು ಕನ್ನಡದ ಕಂಪನ್ನು ಚಿರಸ್ಥಾಯಿಯಾಗಿಸಲು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತಳಮಟ್ಟದಲ್ಲಿ, ವ್ಯಾವಹಾರಿಕ ಜಗತ್ತಿನಲ್ಲಿ, ಶ್ರೀಸಾಮಾನ್ಯನೆಡೆಯಲ್ಲಿ ಕನ್ನಡವನ್ನು ಅಳಿಯದೆ ಉಳಿಸುವುದು.  ಎಂದು ಮನಗಂಡವರು ಚಿದಾನಂದ ಮೂರ್ತಿಗಳು.ಆದ ಕಾರಣ ಅವರಿಗೆ ಬರವಣಿಗೆ ಮತ್ತು  ಶೋಧನೆಯಷ್ಟೇ ಮುಖ್ಯ ಸಂಘಟನೆ ಮತ್ತು ನಾಡು ಕಟ್ಟುವ ಕೆಲಸಗಳ ಹೋರಾಟವೂ ಕೂಡಾ. ಗುರುತಿಸಿಕೊಂಡ ಪ್ರಾದ್ಯಾಪಕ, ಸಂಶೋಧಕ ಅಥವಾ ಸಾಹಿತಿಯಿಂದ ಕ್ರಿಯಾತ್ಮಕವಾಗಿ ಕನ್ನಡ ಕಟ್ಟಲು ಸುಲಭಸಾಧ್ಯ ಎಂದು ಅರಿತವರವರು.
      ಆದರೆ ಇಂದು ಕೆಲವು ವಿದ್ಯಾವಂತ ಅಶಿಕ್ಷಿತರ ಮನಸ್ಥಿತಿ ಹಾಗಿಲ್ಲ. ಕನ್ನಡ ಕಟ್ಟುವುದು ಅಂದರೆ ಅಧ್ಯಾಪನ, ಸೃಜನಶೀಲ ಸಾಹಿತ್ಯ ರಚನೆ, ಸಂಶೋಧನೆ, ಭಾಷಣ, ವಿಶೇಷೋಪನ್ಯಾಸ, ಇವಿಷ್ಟಕ್ಕೇ ಸೀಮಿತವಾಗಿದೆ. ಅದನ್ನು ಘಂಟಾಘೋಷವಾಗಿ ಹೇಳಿಯೂ ಬಿಡ್ತಾರೆ! ಆದರೆ ಬೇಕಾದ್ದಲ್ಲಿ ಬೇಕಾದಂತೆ ವರ್ತಿಸಲು ಅವರು ಮರೆಯುವುದೂ ಇಲ್ಲ. 
     ನವೋದಯ ಕಾಲಘಟ್ಟದ ಅದರ ಬಳಿಕದ ಹಿರಿಯ ಕನ್ನಡ ಸಾಹಿತಿಗಳ, ಸಂಶೋಧಕರ ಕನ್ನಡದ ತಳಮಟ್ಟದ ಕ್ರಿಯಾತ್ಮಕ ಕೆಲಸಕಾರ್ಯಗಳು ಇಡೀ ಕನ್ನಡಕ್ಕೆ ಜಾಗತಿಕ ಸ್ಥಾನಮಾನವನ್ನು ಇಂದು ಕೊಟ್ಟಿರುವುದು ಅವರ ಅಧ್ಯಾಪನ, ಸೃಜನಶೀಲ ಸಾಹಿತ್ಯ ರಚನೆ ಮತ್ತು ಸಂಶೋಧನೆಗಳಿಂದ ಮಾತ್ರವಲ್ಲ. ಇದರ ಜತೆಗೆ ಅವರು ಕ್ರಿಯಾತ್ಮಕವಾಗಿ ಕನ್ನಡ ಕಟ್ಟುವಲ್ಲಿ ಬಲವಾಗಿ ಕಣಕ್ಕಿಳಿದು ದುಡಿದರು. ಅವರಿಗೆ ಪಾಂಡಿತ್ಯ ಪ್ರದರ್ಶನ ಮುಖ್ಯವಾಗಿರಲಿಲ್ಲ. ವಾಸ್ತವದ ನಡೆ ಮತ್ತು ಕನ್ನಡದ ಭವಿಷ್ಯ ಮುಖ್ಯವಾಗಿತ್ತು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಕಿರೀಟ ಬಂದುದರ ಹಿಂದೆಯೂ ಕ್ರಿಯಾತ್ಮಕ ಹೋರಾಟವೊಂದಿರುವುದನ್ನು ಎಂದಿಗೂ ಅಲ್ಲಗಳೆಯಲಾಗದು. ಎಲ್ಲಾ ಹಿರಿಯ ಪ್ರಸಿದ್ಧ ಸಾಹಿತಿ ಸಂಶೋಧಕರ ಅತ್ಮಚರಿತ್ರೆಯಲ್ಲೂ ಇಂತಹ ಒಂದು ಹೋರಾಟದ, ಶ್ರೀಸಾಮಾನ್ಯನೆಡೆಯಲ್ಲಿ ನಿಂತು ಯೋಚಿಸಿದ, ಆ ಮೂಲಕ ರೂಪಿಸಿದ ಕನ್ನಡ ಕಾಯಕವನ್ನು ಕಾಣಲು ಸಾಧ್ಯ.
     ಕನ್ನಡ ಕೆಲಸ ಅಂದರೆ ಅಧ್ಯಾಪನ, ಸಂಶೋಧನೆ, ಪುಸ್ತಕ ಪ್ರಕಟಣೆ, ಸೃಜನಶೀಲ ಸಾಹಿತ್ಯ ರಚನೆ, ವಿಚಾರಗೋಷ್ಟಿ ಗಳಲ್ಲಿ ಪ್ರಬಂಧ ಮಂಡನೆ, ಪಿಎಚ್ಡಿ ಯಂತಹ ಪದವಿ ಗಳಿಸುವುದು, ಕನ್ನಡದ ಬಗ್ಗೆ ಭಾಷಣ ಮಾಡುವುದು - ಇವಿಷ್ಟು ಮಾತ್ರ ಎಂದು ಭಾವಿಸಿದ ಪ್ರಾಧ್ಯಾಪಕರು, ಅಧ್ಯಾಪಕರು, ಸಾಹಿತಿಗಳು, ಸಂಶೋಧಕರು ಇಂದು ಹೆಚ್ಚಾಗುತ್ತಿದ್ದಾರೆ.  ಶ್ರೀಸಾಮಾನ್ಯನ ಜತೆ ಬೆರೆತು ಬಾಳುವುದು, ಕನ್ನಡದ ತಳಮಟ್ಟದ ಸಮಸ್ಯೆಗಳಿಗೆ ಸ್ಪಂದಿಸುವುದು ಇವೆಲ್ಲವೂ ಎರಡನೆಯ ದರ್ಜೆ ಕೆಲಸ ಎಂದು ಪಟ್ಟಬದ್ಧಹಿತಾಸಕ್ತಿಯ ವಿದ್ಯಾವಂತರೆನಿಸಿಕೊಂಡ ಅವಿದ್ಯಾವಂತರು ಭಾವಿಸಿಕೊಂಡಿದ್ದಾರೆ. ಇದು ಅಕ್ಷ್ಯಮ್ಯ ಅಪರಾಧ. ಅದು ಪಾಂಡಿತ್ಯದ ರೀತಿ ಎಂದು ನಂಬಿ, ನಂಬಿಸುತ್ತಿದ್ದಾರೆ.  ಇದು ಅವರ ಮೌಢ್ಯದ ಪರಾಕಾಷ್ಠೆ ಮತ್ತು ಶೋಕಿ, ಬಾಲಿಶತನದ ಮತ್ತೊಂದು ಮುಖ.
      "ಕನ್ನಡ ಕಣ್ಣೆದುರು ಸಾಯುವಾಗ ಧ್ವನಿ ಎತ್ತಬೇಕಾದುದು ಶ್ರೀಸಾಮಾನ್ಯನ ಕೆಲಸ; ಕಣ್ಣೆದುರೇ ಕನ್ನಡ ಸಾಯುವುದನ್ನು ಕಂಡಾಗ ಮೌನವಾಗಿದ್ದು, ಮನೆಗೆ ಬಂದು ಅದರ ಬಗ್ಗೆ ಚೆಂದದ ಕವಿತೆ ಅಥವಾ ಸಂಶೋಧನ ಲೇಖನ  ಬರೆದು ಪ್ರಕಟಿಸಿದರೆ ಅದು ಕವಿತ್ವ ಅಥವಾ ಪಾಂಡಿತ್ಯ ಎಂಬ ಮೂಲಭೂತಶಾಹಿ ಭಾವ ಕೆಲವರಲ್ಲಿದೆ. ಇದು ಕಡಿಮೆಯಾಗಬೇಕು. ಇಂಥ ಕಡೆಗಳಲ್ಲಿ ನಮಗೆಲ್ಲ ಚಿದಾನಂದ ಮೂರ್ತಿಯವರಂತವರ ನಡೆ , ನುಡಿ,  ಮತ್ತು ಬರಹ,  ಶೋಧನೆ ಮಾದರಿಯಾಗಬೇಕು.
     ಕನ್ನಡ  ಬೆಳೆಯಬೇಕಿದ್ದರೆ ತಳವೂ ಗಟ್ಟಿಯಿರಬೇಕು, ಶಾಲೆಗಳಲ್ಲಿ, ವ್ಯವಹಾರದಲ್ಲಿ, ಸಾಮಾಜಿಕ ಆಗುಹೋಗುಗಳಲ್ಲಿ ಪುಷ್ಟಿಪಡೆದಿರಬೇಕು; ಅದಕ್ಕೆ ಸಂಘಟನೆ, ಶೀತಲ ಮತ್ತು ಪ್ರಬಲ ಹೋರಾಟಗಳೂ ಬೇಕು.  ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕಾದ ಅನಿವಾರ್ಯತೆ ತಿಳಿದಿರಬೇಕು.  ಕನ್ನಡಕ್ಕೆ ಪುಟ್ಟ ಅಪಚಾರ ಆದಾಗ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಸರಿಮಾಡಬೇಕಾದ ಕ್ರಿಯಾತ್ಮಕ ನಡೆ ನಮಗೆ ಅತೀ ಮುಖ್ಯ. ಅದೇ ನಾಲ್ಕು ಕಾಲ ಉಳಿಯುವ ನಿಜವಾದ ಪಾಂಡಿತ್ಯ. ಅದೇ ರುಜುವಾದ ಮನುಷ್ಯತ್ವ..
***
        ಚಿದಾನಂದ ಮೂರ್ತಿಯವರ ಬಗ್ಗೆ ವಾಟ್ಸಪ್ ನಲ್ಲಿ ಬಂದ, ಲೇಖನದ ಮೊದಲ ಭಾಗ ಕೆಳಗೆ ಕೊಡಲಾಗಿದೆ. ಒಬ್ಬ ಹಿರಿಯ ವಿದ್ವಾಂಸನು ಚಲನಚಿತ್ರ ಮಂದಿರದಲ್ಲಾದ ಕನ್ನಡದ ಅವಗಣನೆಯನ್ನು ವಿರೋಧಿಸಿದ ರೀತಿಯನ್ನೂ ನಾವಿಂದು ತಿಳಿಯಬೇಕು;  ಪ್ರತಿಯೊಂದು ನಡೆಯಲ್ಲೂ ಇಂದು ಹೆಚ್ಚಾಗಿ ವ್ಯಾಪಿಸಿರುವ ಮೇಲ್ದರ್ಜೆ ಕೆಳದರ್ಜೆ ಭಾವ ಅಳಿದು ಅಲ್ಲಿ ಕನ್ನಡ ಉಳಿಯಬೇಕು. ನಾವು ಆ ಮೂಲಕವೂ ನಮ್ಮ ಅರಿವಿಗೆ ನ್ಯಾಯವೊದಗಿಸಬೇಕು.ನಮ್ಮನ್ನು ಬೆಳೆಸಿದ  ಕನ್ನಡ ಹಾಗೂ  ಸಮಾಜದ ಋಣ ತಿಳಿಯಬೇಕು.
****
        ಇದು ನಿಮಗೆ ಗೊತ್ತೇ!!:
       1982ರ ಮೊದಲ ತಿಂಗಳುಗಳು.  ಬೆಂಗಳೂರಿನ ದಂಡು ಪ್ರದೇಶದ ಒಂದು ಸಿನಿಮಾ ಮಂದಿರದಲ್ಲಿ ಮುಂಗಡ ಟಿಕೆಟ್ಟಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಗಿಡ್ಡು ಎತ್ತರದ ಒಬ್ಬ ಕನ್ನಡ ಪ್ರಾಧ್ಯಾಪಕರು,  ನಾಲ್ಕು ಟಿಕೆಟ್ ಕೊಡಿ”ಎಂದು ಕೇಳಿದರು.  ಕೌಂಟರಿನಲ್ಲಿದ್ದಾತ ಇಂಗ್ಲಿಷ್ ನಲ್ಲಿ ಮಾತನಾಡಲು ಒತ್ತಾಯಿಸಿದ.  ಕೇಳಿದವರು ಮತ್ತೆ ಕನ್ನಡದಲ್ಲಿ ಕೇಳಿದರು.  ಮಾತಿಗೆ ಮಾತು ಬೆಳೆಯಿತು.  ಸಿನಿಮಾ ಮಂದಿರದ ಮ್ಯಾನೇಜರ್ ಬಂದ.  ಕನ್ನಡದಲ್ಲಿ ಮಾತನಾಡಿದುದಕ್ಕೆ ಅವರನ್ನು ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ.  ಸುತ್ತಲೂ ಇದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು.  ಇಡೀ ಘಟನೆಯು ಈ ಪ್ರಾಧ್ಯಾಪಕನಲ್ಲಿ ನೋವು, ಕುಪಿತ, ಅಪಮಾನದ ಬೇಗೆ ಉಂಟುಮಾಡಿತ್ತು.  ಕನ್ನಡದ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು.  ಕರ್ನಾಟಕದ ಆದ್ಯಂತ ಕನ್ನಡ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಉಳಿದ ಬದುಕಿನ ವೇಳೆ,ಆಯಸ್ಸುಗಳನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಈ ಪ್ರಾಧ್ಯಾಪಕರು ಮಾಡಿದರು. ಅವರು ಚಿದಾನಂದಮೂರ್ತಿಯವರು.
                                                           ಬರಹ:*ಡಾ.ರತ್ನಾಕರ ಮಲ್ಲಮೂಲೆ
                                                                  ಕಾಸರಗೋಡು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries