ಮಂಜೇಶ್ವರ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್.ಆರ್.ಸಿ, ಸಿ.ಎ.ಎ, ಎನ್.ಆರ್.ಪಿ ಜ್ಯಾರಿಯನ್ನು ವಿರೋಧಿಸಿ ಮಂಜೇಶ್ವರ ಪೌರತ್ವ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಸಂಜೆ ಬೃಹತ್ ಪೌರತ್ವ ಸಂರಕ್ಷಣಾ ಜಾಥಾ ನಡೆಯಿತು.
ಕುಂಜತ್ತೂರಿನಿಂದ ಆರಂಭಗೊಂಡ ರ್ಯಾಲಿಯು ಹೊಸಂಗಡಿ ಪೇಟೆಯಲ್ಲಿ ಸಮಾರೋಪಗೊಂಡಿತು. ಸಾವಿರಾರು ಮಂದಿ ರ್ಯಾಲಿಯಲ್ಲಿ ಭಾಗವಹಿಸಿ ಕಾಯ್ದೆ ವಿರುದ್ಧ ಘೋಷಣೆ ಕೂಗಿದರು. ವಿವಿಧ ಪಕ್ಷಗಳ ಮುಖಂಡರುಗಳಾದ ಎ. ಕೆ. ಎಂ ಅಶ್ರಫ್, ಹರ್ಷಾದ್ ವರ್ಕಾಡಿ, ಕೆ. ಆರ್ ಜಯಾನಂದ, ಪತ್ರಕರ್ತರಾದ ರಹಿಮಾನ್ ಉದ್ಯಾವರ, ಆರಿಫ್ ಮಚ್ಚ0ಪಾಡಿ,ಮುಖಂಡರಾದ ರಾಮಕೃಷ್ಣ ಕಡಂಬಾರು, ಪ್ರಭಾಕರ ಚೌಟ, ಸೈಫುಲ್ಲಾ ತಂಙಳ್, ಇಕ್ಬಾಲ್ ಹೊಸಂಗಡಿ, ಬಶೀರ್ ಕನಿಲ, ಖಾಲಿದ್ ದುರ್ಗಿಪ್ಪಳ್ಳ, ರಫೀಕ್ ಹೊಸಂಗಡಿ, ಹನೀಫ್ ಪೆÇಸೋಟ್, ಮುಕ್ತಾರ್ ಉದ್ಯಾವರ, ಮುಸ್ತಫಾ ಉದ್ಯಾವರ, ಖಲೀಲ್ ಬಜಾಲ್, ಹಮೀದ್ ಮೊದಲಾದವರು ನೇತೃತ್ವ ನೀಡಿದರು.
ಹೊಸಂಗಡಿಯಲ್ಲಿ ನಡೆದ ಸಮಾರೋಪ ಸಮಾವೇಶವನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಇದರ ವಿರುದ್ಧ ದೇಶದಾದ್ಯಂತ ಜನ ಬೀದಿಗಿಳಿದಿದ್ದು ದೇಶದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟೀಷರ ಬೂಟು ನೆಕ್ಕಿದ ಸಂಘ ಪರಿವಾರ ಇದೀಗ ಭಾರತದಲ್ಲಿ ಜನಿಸಿದ ನಮ್ಮ ಪೌರತ್ವವನ್ನು ಕೇಳುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು. ಫಾಶಿಸ್ಟ್ ಶಕ್ತಿಗಳ ಆಡಳಿತದಲ್ಲಿ ದೇಶ ಅಪಾಯದಲ್ಲಿದೆ. ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದ್ದು, ದೇಶದಲ್ಲಿ ಆಂತರಿಕ ಯುದ್ಧ ನಡೆಯುವುದರಲ್ಲಿ ಸಂದೇಹವಿಲ್ಲ, ಕೋಮುವಾದಿಗಳ ಕೈಯಿಂದ ಈ ದೇಶವನ್ನು ರಕ್ಷಿಸಲು ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.




