ಕಾಸರಗೋಡು: ಕೇಂದ್ರ ಸರ್ಕಾರದ ನೀತಿಯನ್ನು ಪ್ರತಿಭಟಿಸಿ ಹಾಗು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಸಮಿತಿ ಬುಧವಾರ ಕರೆ ನೀಡಿದ್ದ ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮುಷ್ಕರದ ನಿಮಿತ್ತ ಬಸ್ ಸಂಚಾರ ಪೂರ್ಣವಾಗಿ ನಿಲುಗಡೆಗೊಂಡಿತು. ಬಿಎಂಎಸ್ ಬೆಂಬಲಿಗರು ಎಂದಿನಂತೆ ಆಟೋ ರಿಕ್ಷಾ ಸೇವೆ ನಡೆಸಿದ್ದು, ಖಾಸಗಿ ವಾಹನಗಳು ರಸ್ತೆಯಲ್ಲಿ ಸಂಚರಿಸಿತು. ಸರಕು ಲಾರಿಗಳನ್ನು ಹಾಗು ವಾಹನಗಳನ್ನು ತಡೆಯಲಾಯಿತು. ಮುಷ್ಕರ ಬೆಂಬಲಿಗರು ನಗರಗಳಲ್ಲಿ ಮೆರವಣಿಗೆ ನಡೆಸಿದರು.
ಜ.7 ರಂದು ಮಧ್ಯರಾತ್ರಿಯಿಂದ ಆರಂಭಗೊಂಡು ಜ.8 ರಂದು ಮಧ್ಯರಾತ್ರಿಯ ವರೆಗೆ 24 ಗಂಟೆಗಳ ಭಾರತ್ ಬಂದ್ ನಡೆಯಿತು. ಸಾರ್ವತ್ರಿಕ ಮುಷ್ಕರದಿಂದ ಅತ್ಯಗತ್ಯ ಸೇವೆಗಳಾದ ಆಸ್ಪತ್ರೆ, ಹಾಲು, ಪತ್ರಿಕೆ, ಪ್ರವಾಸಿ ಕೇಂದ್ರಗಳು, ಶಬರಿಮಲೆ ತೀರ್ಥಾಟನೆ ಮೊದಲಾದವುಗಳನ್ನು ಹೊರತುಪಡಿಸಲಾಗಿತ್ತು. ಕಾರ್ಮಿಕರ ಕನಿಷ್ಠ ವೇತನ 21 ಸಾವಿರ ರೂ.ಗೇರಿಸಬೇಕು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದಿಂದ ಹಿಂದೆ ಸರಿಯಬೇಕು, ಕಾರ್ಮಿಕ ನೀತಿ ತಿದ್ದುಪಡಿ ಮಾಡಕೂಡದು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಸಮಿತಿ ಭಾರತ್ ಬಂದ್‍ಗೆ ಕರೆ ನೀಡಿತ್ತು.
ಬಿ.ಎಂ.ಎಸ್. ಸಂಘಟನೆ ಹೊರತುಪಡಿಸಿ ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು, ಕೇಂದ್ರ, ರಾಜ್ಯ ಸರಕಾರಿ ನೌಕರರು, ಬ್ಯಾಂಕ್, ಇನ್ಶೂರೆನ್ಸ್, ಬಿಎಸ್‍ಎನ್‍ಎಲ್ ನೌಕರರು ಹಾಗು ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿತ್ತು.
ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಅತ್ಯಂತ ಕಡಿಮೆಯಿದ್ದು, ಇದರಿಂದಾಗಿ ಕಚೇರಿ ನಿರ್ವಹಣೆ ಸಂಪೂರ್ಣ ನಿಲುಗಡೆಗೊಂಡಿತು. ಬ್ಯಾಂಕ್‍ಗಳು ಬೆಳಗ್ಗೆ ತೆರೆದಿದ್ದರೂ ಆ ಬಳಿಕ ಮುಚ್ಚಲಾಯಿತು. ಶಿಕ್ಷಣ ಕ್ಷೇತ್ರ ಸಂಪೂರ್ಣ ನಿಲುಗಡೆಗೊಂಡಿತು.





