ತಿರುವನಂತಪುರ: ಉಗ್ರಗಾಮಿ ಚಟುವಟಿಕೆ ಹತ್ತಿಕ್ಕುವ ನಿಟ್ಟಿನಲ್ಲಿ ಕೇರಳದಲ್ಲಿ ಭಯೋತ್ಪಾದನಾ ನಿಗ್ರಹ ದಳ(ಏಂಟಿ ಟೆರರಿಸ್ಟ್ ಸ್ಕ್ವೇಡ್-ಎಟಿಎಸ್)ಕ್ಕೆ ರೂಪುನೀಡಲಾಗಿದೆ. ಕೊಚ್ಚಿ ನೆಡುಂಬಾಶ್ಯೇರಿ ಪೊಲೀಸ್ ಠಾಣೆ ಸನಿಹ ಸ್ಕ್ವೇಡ್‍ನ ಪ್ರಧಾನ ಕಚೇರಿ ಕಾರ್ಯಾಚರಿಸಲಿದೆ.
ರಾಜ್ಯದಲ್ಲಿ ಖೋಟಾನೋಟು, ಯುಎಪಿಎ, ಉಗ್ರಗಾಮಿ ಚಟುವಟಿಕೆ, ಮಾದಕದ್ರವ್ಯ ಸಾಗಾಟ, ಮಾಫಿಯಾ ಒಳಗೊಂಡಂತೆ ದೇಶವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ಸೂಕ್ಷ್ಮ ನಿಗಾವಹಿಸುವ ಹಾಗೂ ಇವರಿಗೆ ಬೆಂಬಲ ನೀಡುವ ಸಂಘಟನೆಗಳನ್ನು ಗುರುತಿಸಿ ಕೇಸು ದಾಖಲಿಸಿಕೊಳ್ಳುವುದು ಎಟಿಎಸ್ ನ ಪ್ರಮುಖ ಉದ್ದೇಶವಾಗಿದೆ. ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವವರು ಕೇರಳ ಕೆಲವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತುರ್ತಾಗಿ ಎಟಿಎಸ್ ರಚಿಸಲಾಗಿದೆ. ಈ ಹಿಂದೆ ಕೇರಳದಲ್ಲಿ ಎಟಿಎಸ್ ಕಾರ್ಯಾಚರಿಸುತ್ತಿದ್ದರೂ, ಇದರ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವ ಹಿನ್ನೆಲೆಯಲ್ಲಿ ಎಟಿಎಸ್ ಪನ:ರಚಿಸಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ದಕ್ಷ ಅಧಿಕಾರಿಗಳನ್ನು ಗುರುತಿಸಿ ಎಟಿಎಸ್‍ಗೆ ನೇಮಿಸಲಾಗುತ್ತಿದೆ. ಡಿವೈಎಸ್‍ಪಿಗಳು, ಸರ್ಕಲ್ ಇನ್ಸ್‍ಪೆಕ್ಟರ್‍ಗಳು, ಪೊಲೀಸ್ ಕಾನ್‍ಸ್ಟೇಬಲ್‍ಗಳನ್ನೂ ನೇಮಿಸಿಕೊಳ್ಳಲಾಗುತ್ತಿದೆ.
ಕಾಸರಗೋಡು ಸಿ.ಐಗೆ ಹೊಣೆ:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ, ಕಾಸರಗೋಡು ನಗರಠಾಣೆ ಸಿ.ಐ ಅಬ್ದುಲ್ ರಹೀಂ ಅವರನ್ನು ಎಟಿಎಸ್‍ಗೆ ಸೇರ್ಪಡೆಗೊಳಿಸಲಾಗಿದ್ದು, ಇವರಿಗೆ ಕಾಸರಗೋಡು-ಕಣ್ಣೂರು ಜಿಲ್ಲೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ.ಇಂಟೆಲಿಜೆನ್ಸ್, ಇನ್ವೆಸ್ಟಿಗೇಶನ್ ಹಾಗೂ ಆಪರೇಶನ್ ಎಂಬ ಮೂರು ವಿಭಾಗಗಳಲ್ಲಾಗಿ ಎಟಿಎಸ್‍ಗೆ ರೂಪು ನೀಡಲಾಗಿದ್ದು, ಈ ಮೂರೂ ವಿಭಾಗ ಒಬ್ಬ ಎಸ್.ಪಿ ನೇತೃತ್ವದಲ್ಲಿ ಚಟುವಟಿಕೆ ನಡೆಸಲಿದೆ. ಎಟಿಎಸ್‍ಗೆ ಅಧಿಕಾರಿಗಳನ್ನು ನೇಮಿಸುವ ಹೊಣೆಗಾರಿಕೆಯನ್ನು ರಾಜ್ಯಪೊಲೀಸ್ ಕೇಂದ್ರ ಅಡ್ಮಿನಿಸ್ಟ್ರೇಶನ್ ಐ.ಜಿ, ಡಿ.ಐ.ಜಿ(ಸೆಕ್ಯೂರಿಟಿ), ಡಿಐಜಿ(ಪೊಲೀಸ್ ಅಕಾಡಮಿ)ಒಳಗೊಂಡ ಅಧಿಕಾರಿಗಇಗೆ ವಹಿಸಿಕೊಡಲಾಗಿದೆ. ರಾಜ್ಯ ಕ್ರೈಂ ಬ್ರಾಂಚ್ ಮುಖ್ಯಸ್ಥರ ನೇತೃತ್ವದಲ್ಲಿ ಎಟಿಎಸ್ ಕಾರ್ಯಾಚರಿಸಲಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಉಗ್ರಗಾಮಿ ಕೃತ್ಯ ನಡೆದರೂ, ಇದರ ತನಿಖೆಯನ್ನು ಎಟಿಎಸ್ ನಡೆಸಲಿದೆ.




