ಬದಿಯಡ್ಕ: ವಾರ್ಧಕ್ಯದಲ್ಲಿ ಮಾನಸಿಕ ಚಿಂತೆಯೇ ಎಲ್ಲಾ ರೋಗಗಳಿಗೂ ಮೂಲವಾಗಿದೆ. ವಯಸ್ಸಿಗೆ ಅನುಗುಣವಾಗಿ ಆಹಾರಕ್ರಮ, ವ್ಯಾಯಾಮ ಮತ್ತು ಚಿಂತನೆಗಳನ್ನು ರೂಢಿಸಿಕೊಂಡಲ್ಲಿ ಮುಪ್ಪಿನಲ್ಲೂ ಆರೋಗ್ಯವಂತನಾಗಿ ಜೀವಿಸಬಹುದು ಎಂದು ಡಾ. ವೇಣುಗೋಪಾಲ ಕಳೆಯತ್ತೋಡಿ ಅಭಿಪ್ರಾಯಪಟ್ಟರು.
ಬದಿಯಡ್ಕ ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ಹಗಲು ಮನೆಯಲ್ಲಿ ಜರಗಿದ ತಿಳುವಳಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ಹಿರಿಯರು ಚಿಂತಾಕ್ರಾಂತರಾಗದಂತೆ ಎಚ್ಚರವಹಿಸಬೇಕಾಗಿರುವುದು ಪ್ರತೀ ಮನೆಯ ಮಕ್ಕಳ ಕರ್ತವ್ಯವಾಗಿದೆ. ಹಿರಿಯ ಜೀವಗಳು ಸದಾ ಲವಲವಿಕೆಯಿಂದಿರುವಂತೆ ಮನೆಯರು ವರ್ತಿಸಬೇಕು ಎಂದರು.
ಹಿರಿಯರಾದ ಪಿಲಿಂಗಲ್ಲು ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತಿಳುವಳಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಹಿರಿಯ ನಾಗರಿಕರು ಪ್ರಜ್ಞಾವಂತರಾಗಿ ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು. ಮೈರ್ಕಳ ನಾರಾಯನ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ವಂದಿಸಿದರು. ಉಪಾಧ್ಯಕ್ಷ ಈಶ್ವರ ಭಟ್ ಪೆರ್ಮುಖ ನಿರೂಪಿಸಿದರು.





