ಕುಂಬಳೆ: ಮುಳ್ಳೇರಿಯ ಮಂಡಲ ಕುಂಬಳೆ ವಲಯ ಹವ್ಯಕ ಸಭೆ ಮುಜುಂಗಾವು ಘಟಕದ ಸತ್ಯನಾರಾಯಣ ಶರ್ಮರ ಮನೆ 'ಈಶ ಕೃಪಾ' ದಲ್ಲಿ ಇತ್ತೀಚೆಗೆ ಜರಗಿತು.
ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಅವರು ತಿಂಗಳ ವರದಿ ಹಾಗೂ ಮಂಡಲ ಮಾಹಿತಿಯನ್ನು ನೀಡಿದರು. ಕೋಶಾಧಿಕಾರಿ ಡಿ. ಸರ್ವೇಶ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ ಅವರು ಮೂಲ ಮಠ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಮಗ್ರ ಮಾಹಿತಿಯನ್ನು ನೀಡಿದರು. ಘಟಕ ಪ್ರಮುಖರ ನೇತೃತ್ವದಲ್ಲಿ ಪದಾಧಿಕಾರಿಗಳು ಜೊತೆಗೂಡಿ ಅಭಿಯಾನ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಘಟಕ ಪ್ರಮುಖರಿಗೆ ಶ್ರೀ ಗುರು ಅನುಗ್ರಹಿತ ರಾಯಸವನ್ನು ಸಭೆಯಲ್ಲಿ ವಿತರಿಸಲಾಯಿತು. ಘಟಕ ಪ್ರಧಾನರು ತಮ್ಮ ಘಟಕಗಳಲ್ಲಿ ಜರಗುವ ಗುರುವಂದನೆಯ ದಿನಾಂಕ ಮತ್ತು ಸಮಯವನ್ನು ಸಭೆಗೆ ತಿಳಿಸಿದರು. ವಲಯದ ಹನ್ನೆರಡನೇ ಪ್ರದೋಷಕಾಲದ ಪ್ರತಿರುದ್ರವನ್ನು ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಜರಗಿಸುವ ಬಗ್ಗೆ ತೀರ್ಮಾನಿಸಲಾಯಿತು.
ಅಪೇಕ್ಷಿತ ವಿದ್ಯಾರ್ಥಿಗೆ ವಿದ್ಯಾಸಹಾಯಧನ ವಿತರಿಸಲಾಯಿತು. ಜ. 24ರಂದು ಸಂಜೆ 5:30 ಕ್ಕೆ ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ವಲಯದ ಮಾತೃ ವಿಭಾಗದ ನೇತೃತ್ವದಲ್ಲಿ ಕುಂಕುಮಾರ್ಚನೆ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರ ಪಠಣ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಅಸ್ತಂಗತರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಶ್ರೀ ರಾಮತಾರಕ ಮಂತ್ರ ಜಪಿಸಿ ಪ್ರಣಾಮ ಅರ್ಪಿಸಲಾಯಿತು. ಧ್ವಜಾವರೋಹಣ, ಶಾಂತಿಮಂತ್ರ, ಶ್ರೀ ರಾಮತಾರಕ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.



