ಕಾಸರಗೋಡು: ಜಿಲ್ಲೆಯಲ್ಲಿ ಅಕೇಷ್ಯಾ ಮರಗಳನ್ನು ಪೂರ್ಣರೂಪದಲ್ಲಿ ಕಡಿದು ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾ ಅಭಿವೃದ್ಧಿ ಸಮಿತಿ ಸಂಬಂಧಪಟ್ಟವರಿಗೆ ಆದೇಶಿಸಿದೆ.
ಜಿಲ್ಲೆಯ ಹಲವೆಡೆ ಅನೇಕ ವರ್ಷಗಳ ಹಿಂದೆ ಸಮಾಜ ಅರಣ್ಯೀಕರಣ ವಿಭಾಗ ನೆಟ್ಟು ಬೆಳೆಸಿದ್ದ ಈ ಅಕೇಷ್ಯಾ ಮರಗಳು ನಾಡಿಗೆ ಮಾರಕವಾಗಿ ಬೆಳೆದುಇಂತಿವೆ. ಇಲ್ಲಿನ ನೀರನ್ನು ಸಂಪೂರ್ಣ ಹೀರಿ ಪರಿಸರಕ್ಕೆ ಧಕ್ಕೆಯುಂಟುಮಾಡುತ್ತಿವೆ ಎಂದು ಸಮಿತಿ ಆರೋಪಿಸಿದೆ. ಮರಗಳನ್ನು ಕಡಿಯುವ ಕ್ರಮಕ್ಕೆ ವಿಳಂಬ ಬರುವ ಹಿನ್ನೆಲೆಯಲ್ಲಿ ರಖಂ ಆಗಿ ಬೆಲೆ ನಿಗದಿ ಪಡಿಸಿ ಮಾರಾಟ ನಡೆಸಿ ಪೂರ್ಣರೂಪದಲ್ಲಿ ಕಡಿದು ತೆರವುಗೊಳಿಸಲು ಆದೇಶಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಈ ಸಂಬಂಧ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ನಿರ್ಣಯ ಮಂಡಿಸಿದರು.
ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಬಳಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಜೈಲನ್ನು ಬೇರೊಂದು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಭೆಯಲ್ಲಿ ಆಗ್ರಹಿಸಿದರು. ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಕಟ್ಟಡಗಳು ಇತ್ಯಾದಿ ಕೊರತೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಹಿಂದೆ ಆಸ್ಪತ್ರೆಯ ವ್ಯಾಪ್ತಿಯಲ್ಲಿದ್ದ ಒಂದೂವರೆ ಎಕ್ರೆ ಜಾಗವನ್ನು ಜೈಲಿಗಾಗಿ ಬಿಟ್ಟುಕೊಡಲಾಗಿತ್ತು. ಈಗ ಎಂಡೋಸಲ್ಫಾನ್ ಪ್ಯಾಕೇಜ್ ನಲ್ಲಿ ಅಳವಡಿಸಿ ನಿರ್ಮಿಸಲಾದ ಕಟ್ಟಡ ಸಹಿತ ಜೈಲಿನ ಸುರಕ್ಷೆ ವಲಯಕ್ಕೆ ಭೀತಿಯಾಗುತ್ತಿದೆ ಎಮದು ಜೈಲಿನ ವರಿಷ್ಠಾಧಿಕಾರಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದವರು ನುಡಿದರು.
ಇತರ ದೇಶಗಳಲ್ಲಿ ಮೆಡಿಕಲ್ ಕಲಿಕೆ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ರೂರಲ್ ರೆಸಿಡೆನ್ಶಿಯಲ್ ಇಂಟರ್ನ್ ಶಿಪ್ ಅಳವಡಿಸಿ ಪ್ರಾಕ್ಟೀಸ್ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿಸಜಿತ್ ಬಾಬು ಸಭೆಯಲ್ಲಿ ಆದೇಶಿಸಿದರು. ಈಗ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ 9 ಹುದ್ದೆಗಳಲ್ಲಿ ಇಬ್ಬರು ವೈದ್ಯರು ಮಾತ್ರ ಇದ್ದಾರೆ. ಇದು ಸಮಸ್ಯೆಗೆ ಕಾರಣವಾಗುತ್ತಿದೆ. ದಾಖಲಾತಿ ಚಿಕಿತ್ಸೆಗೆ ಇದು ಪ್ರತಿಕೂಲವಾಗುತ್ತಿದೆ. ಇಂಟರ್ನ್ ಶಿಪ್ ಮಂಜೂರು ಮಾಡಿದರೆ ಜಿಲ್ಲೆಯ ಇತರ ಆಸ್ಪತ್ರೆಗಳಲ್ಲೂ ಸಮಸ್ಯೆ ಪರಿಹಾರವಾಗಲಿದೆ ಎಂದವರು ತಿಳಿಸಿದರು. ಜಿಲ್ಲೆಯ ಸರಕಾರಿ ಕಚೇರಿಗಳಿಂದ ವರ್ಗಾವಣೆಗೊಂಡ ತಾಂತ್ರಿಕ ಪರಿಣತರ, ವೈದ್ಯರ ಬಿಡುಗಡೆ ಪತ್ರ ಹಸ್ತಾಂತರಕ್ಕೆಮುನ್ನ ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸಿ ಪಿ.ಎಸ್.ಸಿ. ಮೂಲಕ ನೇಮಕಾತಿ ನಡೆಸುವಂತೆ ಸಭೆ ಸಲಹೆ ಮಾಡಿದೆ.
ಕಾಸರಗೋಡು ನಗರಸಭೆ ವ್ಯಾಪ್ತಿಯ ತಾಳಿಪಡ್ಪು ಮೈದಾನದಲ್ಲಿ 15 ಕುಟುಂಬಗಳು ಬಳಸುತ್ತಿರುವ ಶುಚಿತ್ವಕೊಠಡಿಗಳು ಸಾರ್ವಜನಿಕ ಪ್ರದೇಶಗಳಲ್ಲಿವೆ ಎಂದು ತಿಳಿಸಿ ಮುಚ್ಚುಗಡೆ ಮಾಡಲಾಗಿತ್ತು. ಮುಂದಿನ ಮಂಡಳಿ ಸಭೆಯಲ್ಲಿ ಈ ಸಂಬಂಧ ಮಾತುಕತೆ ನಡೆಸಿ ಇದನ್ನು ತೆರೆಯುವ ಕ್ರಮ ಕೈಗೊಳ್ಳಬೇಕು ಎಂದು ಸಭೆ ಆಗ್ರಹಿಸಿದೆ. ಉಪ್ಪಳ ಐಲ ಮೈದಾನದಲ್ಲಿ ಒಂದೂವರೆ ಎಕ್ರೆ ಜಾಗದಲ್ಲಿ ಮಂಜೇಶ್ವರ ತಾಲೂಕು ಕೇಂದ್ರ ಮತ್ತು ಪೆÇಲೀಸ್ ಠಾಣೆ ನಿರ್ಮಿಸುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆಗ್ರಹಿಸಿದರು. ಜ.13ರ ಮುಂಚಿತವಾಗಿ ವರದಿ ಸಲ್ಲಿಸುವಂತೆ ಅವರು ಹೇಳಿದರು.
ಮಂಜೇಶ್ವರ ತಾಲೂಕು ಆಸ್ಪತ್ರೆ ಅಭಿವೃದ್ಧಿ ಸಂಬಂಧ ಜ.13ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯಲಿದೆ. ಶಾಸಕ, ಬ್ಲೋಕ್ ಪಂಚಾಯತ್ ಅಧ್ಯಕ್ಷ, ಜಿಲ್ಲಾ ವೈದ್ಯಾಧಿಕಾರಿ ಸಭೆಯಲ್ಲಿ ಹಾಜರಿರುವರು.
ಮುಳ್ಳೇರಿಯ -ನಾಟೆಕಲ್ಲು ರಸ್ತೆ ನಿರ್ಮಾಣಕ್ಕೆ ತೋಟಗಾರಿಕೆ ನಿಗಮ ನಡೆಸುತ್ತಿರುವ ತಡೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನವರಿ ತಿಂಗಳ ಮೂರನೇ ವಾರ ಸಭೆ ನಡೆಸಲುಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಆದೇಶಿಸಿದರು. ರಾಷ್ಟ್ರೀಯ ಹೆದ್ದಾರಿ, ಕೆ.ಎಸ್.ಟಿ.ಪಿ. ರಸ್ತೆ ಮೊದಲಾದೆಡೆ ಸಿ.ಸಿ.ಟಿ.ವಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಸಹಾಯಕ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಕಾಸರಗೋಡು ಆರ್.ಡಿ.ಒ.ಕೆ.ರವಿಕುಮಾರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾಸರಗೊಡಿನಲ್ಲಿ 57 ಕಡೆ, ಕಾಞಂಗಾಡಿನಲ್ಲಿ 56 ಕಡೆ ಸಿ.ಸಿ.ಟಿ.ವಿ ಕೆಮರಾ ಸ್ಥಾಪಿಸಲಾಗುವುದು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಗ್ರಾಮಪಚಾಯತ್ ಅಸೊಸಿಯೇಶನ್ ಜಿಲ್ಲಾ ಅಧ್ಯಕ್ಷ ಎ.ಎ.ಜಲೀಲ್, ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಎಸ್ಪಿ ಪಿ.ಬಿ.ಪ್ರಷೋಬ್, ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್ ವರದಿ ವಾಚಿಸಿದರು.




